image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹೆಚ್‌ಡಿಕೆ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಎಸ್ಐಟಿ ರಚನೆ: ಹೈಕೋರ್ಟ್ ಅಸಮಾಧಾನ

ಹೆಚ್‌ಡಿಕೆ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಎಸ್ಐಟಿ ರಚನೆ: ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಭೂಮಿ ಅತಿಕ್ರಮಣ ಮಾಡಿರುವ ಆರೋಪಕ್ಕೆ ಸಂಬಂಧ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ) ಕುರಿತು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಭೂ ಕಬಳಿಕೆ ಸಂಬಂಧಿಸಿದಂತೆ ಲೋಕಾಯುಕ್ತರು ಆದೇಶ ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್.ಆರ್. ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಟಿ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಎಸ್ಐಟಿ ರಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಸಂಬಂಧ ವಿವರಣೆ ನೀಡಲು ಮುಂದಿನ ವಿಚಾರಣೆಗೆ ರಾಜೇಂದ್ರ ಕಠಾರಿಯಾ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಮುಂದುವರಿಯಲು ದಾಖಲೆಗಳಿವೆ. ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಿತು.

ಅಲ್ಲದೆ, ಎಸ್ಐಟಿ ರಚಿಸಬೇಕು ಎಂದು ನ್ಯಾಯಾಲಯ ಆದೇಶಿಸಿಲ್ಲ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಾಜೇಂದ್ರ ಕಠಾರಿಯಾ ಎಸ್ಐಟಿ ರಚಿಸಿದ್ದಾರೆ. ಕಂದಾಯ ಇಲಾಖೆಯು ಎಸ್ಐಟಿ ರಚಿಸಲು ಅಷ್ಟು ಶಕ್ತಿಶಾಲಿಯೇ? ರಾಜ್ಯ ಸರ್ಕಾರವು ಸಂವಿಧಾನಕ್ಕಿಂತ ಮಿಗಿಲಾಗಿದೆಯೇ? 14 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಉಳಿದ 71 ಎಕರೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಬೇಕಿದೆ. ಯಾವ ರೀತಿಯಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ? ಎಷ್ಟು ಎಕರೆ ತೆರವು ಮಾಡಲಾಗಿದೆ? ತಡೆಯಾಜ್ಞೆ ಪಡೆಯಲು ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಕಠಾರಿಯಾ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗುವುದು ಎಂದು ಪೀಠ ಹೇಳಿತು.

ವಿಚಾರಣೆ ವೇಳೆ ಸಮಾಜ ಪರಿವರ್ತನಾ ಸಮುದಾಯದ ಪರ ವಕೀಲರು, ಪ್ರಬಲರಲ್ಲದವರು ಒತ್ತುವರಿ ಮಾಡಿದ್ದ 14 ಎಕರೆಯನ್ನು ತೆರವುಗೊಳಿಸಲಾಗಿದೆ. ಬಲಿಶಾಲಿಗಳು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವು ಮಾಡಿಸಲಾಗಿಲ್ಲ. ಬಲಶಾಲಿಗಳು ಎಸ್ಐಟಿ ರಚನೆಯನ್ನು ಪ್ರಶ್ನಿಸಿ, ತಡೆಯಾಜ್ಞೆ ಪಡೆಯಲು ಅನುಕೂಲ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ತನ್ನ ಜಮೀನನ್ನು ವಶಕ್ಕೆ ಪಡೆಯಲು ನಾವು ಹೋರಾಟ ಮಾಡುತ್ತಿದ್ದೇವೆ. ಆರೋಪಿಗಳ ಹೆಸರನ್ನು ಕೇಳಿದ ತಕ್ಷಣ ಸರ್ಕಾರ ಬೆಚ್ಚುತ್ತಿದೆ. ಆರೋಪಿಗಳ ಜೊತೆ ಸರ್ಕಾರ ಕೈಜೋಡಿಸಿದೆ. ಇಲ್ಲಿ ಅಪ್ರಾಮಾಣಿಕತೆ ಎದ್ದು ಕಾಣುತ್ತಿದೆ. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಸರ್ಕಾರದ ಪರ ವಕೀಲರು, ಒತ್ತುವರಿ ಮಾಡಿರುವ ಸರ್ಕಾರದ ಜಮೀನನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಕೆರೆಗೆ ಸಂಬಂಧಿಸಿದ 6 ಎಕರೆ 20 ಗಂಟೆ ತೆರವು ಮಾಡಲಾಗಿದೆ. 11 ಎಕರೆ 20 ಗುಂಟೆಯನ್ನು ಪತ್ತೆ ಮಾಡಿದ್ದೇವೆ. ಐಜಿಪಿ ಮತ್ತು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒಳಗೊಂಡ ಎಸ್ಐಟಿ ರಚಿಸಲಾಗಿದೆ. ಎಸ್ಐಟಿ ರಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಕಾನೂನು ಜಾರಿಗೊಳಿಸಲು ಎಸ್ಐಟಿ ರಚಿಸಲಾಗಿದೆ, 18 ಎಕರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅಸಲಿ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ