image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ನೇರ‌ ನೇಮಕಾತಿ ಮೂಲಕ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ

ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ ನೇರ‌ ನೇಮಕಾತಿ ಮೂಲಕ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ

ಬೆಂಗಳೂರು : ನೇರ ನೇಮಕಾತಿ ಮೂಲಕ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ 170 ಹುದ್ದೆಗಳಿಗೆ ಮಂಜೂರಾತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ‌‌ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.‌

ವಿಧಾನಪರಿಷತ್​ ಪ್ರಶ್ತೋತರ ಕಲಾಪದ ವೇಳೆ ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಹಾರ ಸುರಕ್ಷತಾ ಪ್ರಾಧಿಕಾರದಲ್ಲಿ 2017ರಲ್ಲಿ 382 ಹುದ್ದೆಗಳನ್ನು ಸೃಷ್ಟಿಸಲಾಗಿದೆ‌.‌ ಹಾಲಿ ಆರೋಗ್ಯ ಇಲಾಖೆಯಿಂದ 130 ಅಧಿಕಾರಿಗಳು ಎರವಲು ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರವಲು ಮಾಡಿದ್ದ 27 ತಜ್ಞ ವೈದ್ಯರ ಪೈಕಿ 18 ಮಂದಿಯನ್ನ ಎರವಲು ಸೇವೆ ರದ್ದುಗೊಳಿಸಿ ಆದೇಶಿಸಲಾಗಿದೆ ಎಂದರು.

ಇದನ್ನು ಕೆಲವರು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಸರ್ಕಾರ ಕಾರ್ಯಪ್ರವೃತ್ತರಾಗಿದ್ದು, ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ‌. ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ನೇರ ನೇಮಕಾತಿ ಮೂಲಕ 170 ಹುದ್ದೆಗಳ ನೇಮಕಾತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ನಕಲಿ ಅಂಕಪಟ್ಟಿ ಸಲ್ಲಿಸಿ ಆರು ಮಂದಿ ನೌಕರರನ್ನು ಸಸ್ಪೆಂಡ್ ಮಾಡಲಾಗಿದೆ. ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನಕಲಿ ಔಷಧ ಕಂಪೆ‌ನಿಗಳು ಹಾಗೂ ಮಾರಾಟಗಾರರ ವಿರುದ್ದ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದಡಿ ತ್ವರಿತ ಕಾನೂನು ಕ್ರಮ ಕೈಗೊಳ್ಳಲು ಪ್ರತ್ಯೇಕ ನ್ಯಾಯಾಲಯ ರಚಿಸುವಂತೆ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನಪರಿಷತ್​ನಲ್ಲಿ, ನಕಲಿ ಔಷಧ ತಯಾರಿಕಾ ಕಂಪೆನಿಗಳು ಹಾಗೂ ಮಾರಾಟಗಾರರ ವಿರುದ್ದ ಕೈಗೊಂಡ ಕ್ರಮ ಬಗ್ಗೆ ಕಾಂಗ್ರೆಸ್ ಸದಸ್ಯ ಎಸ್.ವಿ‌.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುಂಡೂರಾವ್, ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಮಾಡುತ್ತಿದ್ದ 21 ಪ್ರಕರಣಗಳನ್ನು ಪತ್ತೆ ಹಚ್ವಲಾಗಿದೆ. ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ ಅಡಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವೆಲ್ಲವೂ ವಿಚಾರಣೆ ಹಂತದಲ್ಲಿದೆ.‌ ನಕಲಿ ಔಷಧಿ ತಯಾರಕರ ಹಾಗೂ ಮಾರಾಟಗಾರರ ವಿರುದ್ಧ ತ್ವರಿತಗತಿ ವಿಚಾರಣೆ ನಡೆಸಿ, ಶಿಕ್ಷೆಗೊಳಪಡಿಸಲು ಕಾನೂನು ಇಲಾಖೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

Category
ಕರಾವಳಿ ತರಂಗಿಣಿ