ತುಮಕೂರು: "ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯ ಹೆಸರನ್ನು ತುಮಕೂರು ರೈಲ್ವೆ ನಿಲ್ದಾಣಕ್ಕೆ ಇಡಲು ರಾಜ್ಯ ಸರಕಾರ ಪರೋಕ್ಷವಾಗಿ ಹಿಂದೇಟು ಹಾಕುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಂದ್ರದಿಂದ ಪತ್ರ ಬರೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ" ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ದೂರಿದರು. ತುಮಕೂರಿನಲ್ಲಿ ಶೆಟ್ಟಿಹಳ್ಳಿ ಗೇಟ್ ಬದಲಿಗೆ ಪಾದಚಾರಿ ಸಬ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
"ನಾನೇ ಸ್ವತಃ ಒಂದಲ್ಲ, ನಾಲ್ಕೈದು ಬಾರಿ ಈ ಬಗ್ಗೆ ಮಾತನಾಡಲು ಹೋಗಿದ್ದೇನೆ. ಆದರೆ ಸಿದ್ದರಾಮಯ್ಯನವರಿಗೆ ಯಾಕೋ ಏನೋ ಆ ಪತ್ರಕ್ಕೆ ಸಹಿ ಹಾಕುವ ಮನಸ್ಸು ಇನ್ನೂ ಬಂದಿಲ್ಲ. ನಿನ್ನೆಯೂ ಒಂದು ಕಾರ್ಯಕ್ರಮದಲ್ಲಿ ವಿನಂತಿ ಮಾಡಿದ್ದೆ. ಇಂದೂ ಕೂಡ ಇಂತಹ ಪುಣ್ಯಾತ್ಮನ ಹೆಸರನ್ನು ರೈಲ್ವೆ ನಿಲ್ದಾಣಕ್ಕಿಡಲು ಹೊರಟಾಗ, ಯಾರೋ ಮಾತನಾಡುತ್ತಾರೆ ಎಂದು ಹಿಂಜರಿದರೆ, ಅದರಿಂದ ನನಗೇನೂ ನಷ್ಟ ಇಲ್ಲ. ಯಾರಿಗೆ ನಷ್ಟ ಮಾಡಬೇಕೋ ಭಗವಂತ ನೋಡಿಕೊಳ್ಳುತ್ತಾನೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಈ ಸಂದರ್ಭದಲ್ಲಿ ವಿನಂತಿ ಮಾಡುತ್ತೇನೆ" ಎಂದು ಹೇಳಿದರು.
"ಬಡವರ ಮಕ್ಕಳು ಕೂಡ ಶಿಕ್ಷಣ ಪಡೆಯಬೇಕು. ದೇಶದಲ್ಲಿ ಒಂದು ಹಂತಕ್ಕೆ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದಂತಹ ನಡೆದಾಡುವ ದೇವರ ಹೆಸರನ್ನು ರೈಲ್ವೇ ನಿಲ್ದಾಣಕ್ಕೆ ಇಡುವ ಕುರಿತು, ಅಭಿಪ್ರಾಯ ಕೇಳಿದ ಪತ್ರವನ್ನು ನೀವು ಐದಾರು ತಿಂಗಳಿಂದ ಪ್ರತಿಕ್ರಿಯೆ ನೀಡದೇ ಇಟ್ಟುಕೊಂಡಿರುವವುದು ನಿಮಗೇ ಸರಿಯೆನಿಸುತ್ತದೆಯೇ?" ಎಂದು ಪ್ರಶ್ನಿಸಿದರು.
"ಸಂಬಂಧಪಟ್ಟ ಮುಖ್ಯ ಕಾರ್ಯದರ್ಶಿ ಜೊತೆ ಮಾತಾಡಿದ್ದೇನೆ. ನಮ್ಮ ಜಿಲ್ಲೆಯವರೇ ಆದ ಹಣಕಾಸು ಕಾರ್ಯದರ್ಶಿಯವರಲ್ಲೂ ಮಾತನಾಡಿದ್ದೇನೆ. ಅವರು ಮಾಡ್ಬೇಕು ಸರ್, ಒತ್ತಡ ಇದೆ ಅಂತಾರೆ. ಇದು ದುರಂತ. ಪ್ರಾಯಶಃ ಮುಂದೊಂದು ದಿನ ಇದಕ್ಕೆ ಬೆಲೆ ತೆರಬೇಕಾದೀತು. ರಾಜ್ಯ ಮತ್ತು ಕೇಂದ್ರ ಸರಕಾರ ಒಂದೇ ನಾಣ್ಯದ ಎರಡು ಮುಖಗಳ ಹಾಗೆ ಕೆಲಸ ಮಾಡಬೇಕು. ಇದೇ ಕಾರಣಕ್ಕೆ 9 ತಿಂಗಳಿನಿಂದಲೂ ನಾನು ಯಾವುದೇ ರಾಜ್ಯ ಸರಕಾರದ ಕಾರ್ಯಕ್ರಮಗಳಿಗೆ ಹೋಗಿಲ್ಲ. ಬೇಕಿಲ್ಲ, ನೀವು ಮಾಡಿಕೊಳ್ಳಿ ಎಂದಿದ್ದೇನೆ. ನನಗೆ ಕಾರ್ಯಕ್ರಮ ಅಲ್ಲ, ಕೆಲಸ ಮುಖ್ಯ" ಎಂದರು.