ಬೆಂಗಳೂರು: ರಕ್ತಹೀನತೆ (Animia) ಬಳಲುತ್ತಿರುವ ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ರೋಗನಿರೋಧಕ ಹಾಗೂ ಪೌಷ್ಠಿಕಾಂಶ ಸಾಮಗ್ರಿ ಕಿಟ್ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.
ಪ್ರಶ್ನೋತ್ತರ ಕಲಾಪ ವೇಳೆ ವಿಧಾನಪರಿಷತ್ತಿನ ವಿಪಕ್ಷದ ಸಚೇತಕರಾಗಿರುವ ಎನ್. ರವಿಕುಮಾರ್, "ಕಾರ್ಮಿಕರಿಗೆ ನೀಡಲಾಗುವ ಕಿಟ್ ವಿತರಣೆಯಲ್ಲಿ ಸರ್ಕಾರವು ಭ್ರಷ್ಟಾಚಾರವೆಸಗಿದೆ. ಕಳೆದ ಆರ್ಥಿಕ ಸಾಲಿನಲ್ಲಿ 12.39 ಲಕ್ಷ ಕಾರ್ಮಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಶೇ.16.6ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. 75 ಕೋಟಿ ರೂ.ವೆಚ್ಚದಲ್ಲಿ ಟೆಂಡರ್ ಕರೆದು 26 ಸಾವಿರ ಕಾರ್ಮಿಕರಿಗೆ ನ್ಯೂಟ್ರಿಷಿಯನ್ ಕಿಟ್ ವಿತರಿಸಿತ್ತು. ಒಂದು ಕಿಟ್ಗೆ ಮಾರುಕಟ್ಟೆಯಲ್ಲಿ 950 ರೂ, ಆದರೆ ಸರ್ಕಾರವು ಪ್ರತಿ ಕಿಟ್ಗೆ 2,600 ರೂಪಾಯಿ ನೀಡಿ ಖರೀದಿಸಿದೆ. ಅಲ್ಲದೆ ಒಂದೇ ಕಂಪೆನಿಗೆ ಟೆಂಡರ್ ನೀಡುವ ಮೂಲಕ, ಭ್ರಷ್ಟಾಚಾರಕ್ಕೆ ಕಾರಣವಾಗಿದೆ" ಎಂದು ಆರೋಪಿಸಿದರು.
ಆರೋಪಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, "2023ರಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ನಡೆಸಿದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕಾರ್ಮಿಕರಿಗೆ ನ್ಯೂಟ್ರಿಷಿಯನ್ ಕಿಟ್ ವಿತರಿಸಲು 75 ಕೋಟಿ ರೂ. ಹಣವನ್ನು ಕಳೆದ ಆರ್ಥಿಕ ಸಾಲಿನ ಬಜೆಟ್ನಲ್ಲಿ ಮೀಸಲಿರಿಸಲಾಗಿತ್ತು. ಇದರಂತೆ ನಿಯಾಮನುಸಾರ ಟೆಂಡರ್ ಕರೆದು ಕಿಟ್ ವಿತರಣೆ ಮಾಡಲಾಗಿದೆ. ಆಯ್ಕೆಯಾದ ಕಂಪನಿಯ ತೃಪ್ತಿಕರ ಕೆಲಸ ನಿರ್ವಹಣೆ ಬಗ್ಗೆ ಕ್ಷೇತ್ರಮಟ್ಟದ ಅಧಿಕಾರಿಗಳಿಂದ ದೃಢೀಕರಣ ಪಡೆಯಲಾಗಿದೆ. ಕಿಟ್ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲು ಪ್ರತ್ಯೇಕ ಅಧಿಕಾರಿಗಳಿಂದ ತಪಾಸಣೆ ನಡೆಸಲಾಗಿದೆ. ಹೀಗಾಗಿ ಕಿಟ್ ವಿತರಣೆ ಹಾಗೂ ಟೆಂಡರ್ನಲ್ಲಿ ಯಾವುದೇ ಭ್ರಷ್ಟಾಚಾರವೆಸಗಿಲ್ಲ" ಎಂದು ಸಮರ್ಥಿಸಿಕೊಂಡರು.