image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಚಿವ ಸಂಪುಟ ಸಭೆಯಲ್ಲಿ ಗ್ರಾಮಗಳಲ್ಲಿ ಕ್ರಮಬದ್ಧವಲ್ಲದ ಆಸ್ತಿಗಳಿಗೆ ಇ-ಖಾತಾ ನೀಡುವ ತಿದ್ದುಪಡಿ ವಿಧೇಯಕ ಮಂಡನೆ ಸೇರಿದಂತೆ ಹಲವು ವಿಧೇಯಕಗಳಿಗೆ ಅಸ್ತು

ಸಚಿವ ಸಂಪುಟ ಸಭೆಯಲ್ಲಿ ಗ್ರಾಮಗಳಲ್ಲಿ ಕ್ರಮಬದ್ಧವಲ್ಲದ ಆಸ್ತಿಗಳಿಗೆ ಇ-ಖಾತಾ ನೀಡುವ ತಿದ್ದುಪಡಿ ವಿಧೇಯಕ ಮಂಡನೆ ಸೇರಿದಂತೆ ಹಲವು ವಿಧೇಯಕಗಳಿಗೆ ಅಸ್ತು

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಭೂ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕ್ರಮ ಬದ್ಧವಲ್ಲದ ನಿವೇಶನ ಹಾಗೂ ಕಟ್ಟಡಗಳಿಗೆ ಇ-ಖಾತಾ ನೀಡಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2025 ಅನ್ನು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.‌

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮೀಣ ವ್ಯಾಪ್ತಿಯ ಖಾಸಗಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ-1993ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಅದರಂತೆ 2013 ಜೂ.14ರ ಮೊದಲು ಹಾಗೂ ನಂತರ ನೋಂದಣಿಯಾದ ಎಲ್ಲಾ ನಿವೇಶನ, ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ನೀಡಲಾಗುತ್ತದೆ.‌ ಅಂದರೆ 2013ಕ್ಕೆ ಮೊದಲು ಅಥವಾ ನಂತರ ನೋಂದಣಿಯಾದ ಎಲ್ಲಾ ನಿವೇಶನ ಹಾಗೂ ಕಟ್ಟಡಗಳಿಗೂ ಇ-ಖಾತೆ ನೀಡಲಾಗುವುದು.

ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸುಮಾರು 96 ಲಕ್ಷ ಆಸ್ತಿಗಳಿಗೆ ಇ-ಖಾತಾ ಇಲ್ಲ. ಪ್ರಸ್ತುತ ಗ್ರಾಮ ಪಂಚಾಯತಿಗಳು ಅಧಿಕೃತ ಆಸ್ತಿಗಳಿಂದ ತೆರಿಗೆ ಸಂಗ್ರಹಣೆ ಮಾಡುತ್ತಿವೆ. ಗ್ರಾಮಗಳು ಯೋಜಿತ ರೀತಿಯಲ್ಲಿ ಬೆಳೆಯದೆ ಅನಧಿಕೃತ ಲೇಔಟ್‌ಗಳು ಸೃಷ್ಟಿಯಾಗುತ್ತಿವೆ. ಇದರಿಂದಾಗಿ, ಗ್ರಾಮಗಳಿಗೆ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಷ್ಟವಾಗುತ್ತಿದೆ.‌ ಅನಧಿಕೃತ ಲೇಔಟ್‌ಗಳ ಹಾವಳಿ ತಡೆಗಟ್ಟಲು ಇ-ಸ್ವತ್ತು ತಂತ್ರಾಂಶವನ್ನು 2013ರ ಜೂನ್ 15 ರಿಂದ ಜಾರಿಗೆ ತರಲಾಗಿದೆ. ಪ್ರಸ್ತುತ ಪಂಚತಂತ್ರ (ಪಿ-2) ನಲ್ಲಿ ಸುಮಾರು 1.40 ಕೋಟಿ ಆಸ್ತಿಗಳು ನಮೂದಾಗಿವೆ.

ಆದರೆ ಈ ಪೈಕಿ ಇ-ಸ್ವತ್ತು ತಂತ್ರಾಂಶದಲ್ಲಿ ಕೇವಲ 44 ಲಕ್ಷ ಆಸ್ತಿಗಳು ಮಾತ್ರ ನಮೂದಾಗಿದೆ. ಅಂದರೆ, ಸುಮಾರು 96 ಲಕ್ಷ ಆಸ್ತಿಗಳು ಇ-ಸ್ವತ್ತು ತಂತ್ರಾಂಶದಿಂದ ಹೊರಗಡೆ ಇವೆ. ಇದೀಗ ಈ ಆಸ್ತಿಗಳಿಗೂ ಇ-ಖಾತಾ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂತಹ ಅನಧಿಕೃತ ಸ್ವತ್ತುಗಳ ಮೇಲೆ ಶುಲ್ಕ/ದಂಡ ವಿಧಿಸಿ ವಸೂಲಿ ಮಾಡಿ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಢೀಕರಿಸಲು ಸರ್ಕಾರ ಮುಂದಾಗಿದೆ. ಭೂ ಪರಿವರ್ತನೆ ಆಗಿರದ ಅಥವಾ ಭೂ ಪರಿವರ್ತಿತ ಆದರೆ ವಿನ್ಯಾಸ ನಕ್ಷೆ ಅನುಮೋದಿತವಾಗಿರದ ರೆವಿನ್ಯೂ ಭೂಮಿಯಲ್ಲಿನ ನಿವೇಶನಗಳಿಗೆ ಇ-ಖಾತಾ ನೀಡಲು ನಿರ್ಧರಿಸಲಾಗಿದೆ.

ಕೆಪಿಎಸ್​ಸಿ ಅಧ್ಯಕ್ಷ, ಸದಸ್ಯರ ಆಯ್ಕೆಗಾಗಿ ಹುಡುಕಾಟ ಸಮಿತಿ ರಚನೆಗೆ ಒಪ್ಪಿಗೆ: ಕರ್ನಾಟಕ ರಾಜ್ಯ ಸೇವೆಗಳಲ್ಲಿನ ಹುದ್ದೆಗಳಿಗೆ ಮತ್ತು ಸೇವೆಗಳಿಗೆ ಆಯ್ಕೆ ಮಾಡುವಲ್ಲಿ ಮುಕ್ತ ನಿಷ್ಪಕ್ಷಪಾತವಾದ ಮತ್ತು ಅರ್ಹತೆ ಆಧಾರಿತ ಆಯ್ಕೆಗಳನ್ನು ಮಾಡಲು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಜಾರಿಯಲ್ಲಿರುವ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಪಿ.ಸಿ ಹೋಟಾ ಸಮಿತಿ ರಚಿಸಿತ್ತು. ಸಮಿತಿ ನೀಡಿರುವ ವರದಿಯಲ್ಲಿನ ಶಿಫಾರಸ್ಸಿನಂತೆ ಆಯೋಗಕ್ಕೆ ಅರ್ಹ ಅಧ್ಯಕ್ಷರು ಹಾಗೂ ಸದಸ್ಯರನ್ನು ಆರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನೊಳಗೊಂಡ ಒಂದು ವ್ಯಾಪಕ ಆಧಾರಿತ ಹುಡುಕಾಟ ಸಮಿತಿ (Broad Based Search Committee)ಯನ್ನು ರಚಿಸಲು ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದೆ.

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪ್ರಸ್ತುತ ಇರುವ 15 ಜನ ಸದಸ್ಯರ ಸಂಖ್ಯೆಯಲ್ಲಿ ಕಡಿಮೆ ಮಾಡಬಹುದಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲು ಹಾಗೂ ಸಚಿವ ಸಂಪುಟ ಸಭೆಯು ನಿರ್ಧರಿಸುವಂತೆ ಆಯೋಗದ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡಿ, ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು)(ತಿದ್ದುಪಡಿ) ವಿನಿಯಮಗಳು, 2023ರ 3ನೇ ನಿಯಮಕ್ಕೆ ತಿದ್ದುಪಡಿ ತರಲು ರಾಜ್ಯಪಾಲರ ಅನುಮೋದನೆಯನ್ನು ಪಡೆಯಲು ಒಪ್ಪಿಗೆ ಸೂಚಿಸಲಾಗಿದೆ.

Category
ಕರಾವಳಿ ತರಂಗಿಣಿ