image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಿವೃತ್ತಿ ಸೌಲಭ್ಯ 4 ವಾರಗಳಲ್ಲಿ ಬಿಡುಗಡೆ ಮಾಡಿ: ಹೈಕೋರ್ಟ್

ನಿವೃತ್ತಿ ಸೌಲಭ್ಯ 4 ವಾರಗಳಲ್ಲಿ ಬಿಡುಗಡೆ ಮಾಡಿ: ಹೈಕೋರ್ಟ್

ಬೆಂಗಳೂರು: ನಿವೃತ್ತಿಯ ಐದು ವರ್ಷ ಕಳೆದರೂ ಸರ್ಕಾರ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಪ್ರಾಧ್ಯಾಪಕರೊಬ್ಬರಿಗೆ ಪಿಂಚಣಿ ಬಿಡುಗಡೆ ಮಾಡದೆ ಅವರ ಜೀವದೊಂದಿಗೆ ಆಟವಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮುಂದಿನ ನಾಲ್ಕು ವಾರಗಳಲ್ಲಿ ಸಂಪೂರ್ಣ ನಿವೃತ್ತಿ ಸೌಲಭ್ಯಗಳು ಮತ್ತು ರಜೆಗಳ ನಗದೀಕರಣ ಮಾಡಿ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದೆ.

ನಿವೃತ್ತ ಪ್ರಾಧ್ಯಾಪಕ ಎಂ.ಎ.ಡವಳೇಶ್ವರ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೆಶ ನೀಡಿದೆ. ಅಲ್ಲದೆ, ಅರ್ಜಿದಾರ ಡವಳೇಶ್ವರ ಅವರು ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆದರೂ, ಅವರಿಗೆ ಪಿಂಚಣಿ ಬಿಡುಗಡೆ ಮಾಡಿಲ್ಲ. ರಜೆ ದಿನಗಳಂದು ಸೇವೆ ಸಲ್ಲಿಸಿರುವುದರ ಬದಲಿಗೆ ನಗದೀಕರಣಕ್ಕೆ ಅವಕಾಶ ಕಲ್ಪಿಸಿಲ್ಲ. ಗ್ರಾಚ್ಯುಟಿ ಮೊತ್ತವನ್ನು ಪಾವತಿ ಮಾಡದೆ ಅರ್ಜಿದಾರರ ಜೀವದೊಂದಿಗೆ ಆಟವಾಡಲು ಬಯಸುತ್ತಿದೆ ಎಂದು ಪೀಠ ಅಸಮಾಧಾನ ಹೊರಹಾಕಿದರ.

ಅರ್ಜಿದಾರರಿಗೆ ಕಳೆದ 5 ವರ್ಷಗಳಿಂದ ಸರ್ಕಾರ ಇಲ್ಲವೇ ವಿವಿ ಪಿಂಚಣಿ ಪಾವತಿಸಬೇಕೇ ಎಂಬುದನ್ನು ನಿರ್ಧರಿಸಲು ಕಡತವನ್ನು ಮೇಜಿನಿಂದ ಮೇಜಿಗೆ ಸಾಗಿಸಲಾಗುತ್ತಿದೆ. 5 ವರ್ಷ ಕಳೆದರೂ ಒಂದು ರೂಪಾಯಿಯೂ ಪಿಂಚಣಿ ನೀಡಿಲ್ಲ. ಬೇರೆ ದಾರಿ ಇಲ್ಲದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತಾಗಿದೆ ಎಂದು ಪೀಠ ಹೇಳಿದೆ.

ಅಲ್ಲದೆ, ಅರ್ಜಿದಾರರು 30 ಲಕ್ಷ ರೂ.ಗಳವರೆಗೂ ನಿವೃತ್ತಿ ಸೌಲಭ್ಯಗಳು ಬರಬೇಕು ಎಂದು ಕೋರಿದ್ದಾರೆ. ಆದರೆ, ಇದಕ್ಕೆ ವಿಶ್ವವಿದ್ಯಾಲಯ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಜತೆಗೆ, ಅರ್ಜಿದಾರರು ವಿಶ್ವವಿದ್ಯಾಲಯಕ್ಕಾಗಿ ಸೇವೆ ಸಲ್ಲಿಸಿದ್ದರಿಂದ ವಿವಿಯೇ ಎಲ್ಲ ಸೌಲಭ್ಯಗಳನ್ನು ಪಾವತಿಸಬೇಕು ಸರ್ಕಾರ ಹೇಳಿದೆ. ಸರ್ಕಾರ ಮತ್ತು ವಿಶ್ವವಿದ್ಯಾಲಯದಲ್ಲಿನ ಗೊಂದಲದಿಂದ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಡ ಪ್ರಾಧ್ಯಾಪಕ ತೊಂದರೆ ಅನುಭವಿಸುವಂತಾಗಿದೆ. ಕಚೇರಿಂದ ಕಚೇರಿಗೆ ಅಲೆಯುವಂತಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅರ್ಜಿದಾರ ಡವಳೇಶ್ವರ ಅವರು 1982ರ ಜುಲೈ 26ರಂದು ರಾಜ್ಯ ಸರ್ಕಾರದ ಅನುದಾನಿತ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕವಾಗಿದ್ದರು. ಇದಾದ 30 ವರ್ಷಗಳ ನಂತರ ಈ ಕಾಲೇಜು, ಹೊಸದಾಗಿ ರಚನೆಯಾಗಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಬದಲಾಗಿತ್ತು. 2015ರ ಆಗಸ್ಟ್ 31ರಂದು ಸೇವೆಯಿಂದ ಡವಳೇಶ್ವರ ನಿವೃತ್ತರಾಗಿದ್ದರು, ಆದರೆ, ಅವರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳನ್ನು ಪಾವತಿ ಮಾಡಿರಲಿಲ್ಲ. ಈ ಸಂಬಂಧ ನಿವೃತ್ತಿ ಸೌಲಭ್ಯಗಳನ್ನು ಪಾವತಿ ಮಾಡುವಂತೆ ವಿಶ್ವವಿದ್ಯಾಲಯ ಮತ್ತು ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದು ಮನವಿ ಮಾಡಿದ್ದರು. ಆದರೆ, ವಿಶ್ವವಿದ್ಯಾಲಯೇ ತನ್ನ ನಿಧಿಯಿಂದ ಅರ್ಜಿದಾರರ ನಿವೃತ್ತ ಸೌಲಭ್ಯಗಳನ್ನು ಪಾವತಿಸಬೇಕು ಎಂಬುದಾಗಿ ಸರ್ಕಾರ ನಿರ್ದೇಶನ ನೀಡಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಪ್ರಾಧ್ಯಾಪಕರಾಗಿ ಸೇರಿದ 30 ವರ್ಷಗಳ ಬಳಿಕ ಆ ಕಾಲೇಜು ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟಿದೆ. ಇದಾದ ಮೂರು ವರ್ಷಗಳಲ್ಲಿ ನಿವೃತ್ತರಾಗಿದ್ದಾರೆ. ಅಂದರೆ, ಅರ್ಜಿದಾರರು ಕೇವಲ 3 ವರ್ಷಗಳ ಕಾಲ ಮಾತ್ರ ವಿವಿಯ ಉದ್ಯೋಗಿಯಾಗಿದ್ದಾರೆ. ಆದ್ದರಿಂದ 33 ವರ್ಷಗಳ ಕಾಲದ ಗ್ರಾಚ್ಯೂಟಿ ಪಿಂಚಣಿಯನ್ನು ನಿರಾಕರಿಸಲು ವಿವಿ ಕಾರಣ ನೀಡಿದೆ. ಆದರೆ, ಈವರೆಗೂ ಯಾವುದೇ ಸೌಲಭ್ಯಗಳನ್ನು ಪಾವತಿ ಮಾಡಿಲ್ಲ ಎಂದು ಪೀಠಕ್ಕೆ ವಿವರಣೆ ನೀಡಿದ್ದರು.

Category
ಕರಾವಳಿ ತರಂಗಿಣಿ