image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಫ್ಲೈಓವರ್ ಕಾಮಗಾರಿಗೆ ವೇಗ ನೀಡುವಂತೆ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ

ಫ್ಲೈಓವರ್ ಕಾಮಗಾರಿಗೆ ವೇಗ ನೀಡುವಂತೆ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹೃದಯ ಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಮಂದಗತಿಯಲ್ಲಿ ಸಾಗಿರುವ ಫ್ಲೈ ಓವರ್ ಕಾಮಗಾರಿ ಪ್ರಗತಿ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು ಬುಧವಾರ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.

ನವದೆಹಲಿಯ ತಮ್ಮ ಕಚೇರಿಯಿಂದಲೇ ಧಾರವಾಡ ಸಂಸದರು ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿಯೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಗಡ್ಕರಿ, ಫ್ಲೈಓವರ್ ಕಾಮಗಾರಿ ಪ್ರಗತಿಯ ಸಂಪೂರ್ಣ ಮಾಹಿತಿ ಪಡೆದು ತ್ವರಿತ ವೇಗ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಾಣಿಜ್ಯ ನಗರಿ ಹುಬ್ಬಳ್ಳಿ ಹೃದಯ ಭಾಗದಲ್ಲಿ ನಿರ್ಮಿಸುತ್ತಿರುವ 3.61 ಕಿ.ಮೀ ವಿಸ್ತೀರ್ಣದ ಈ ಎಲಿವೇಟೆಡ್ ರಸ್ತೆ (ಎತ್ತರದ ಕಾರಿಡಾರ್) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ನೀಡುತ್ತಿದ್ದರೂ ಕಾಮಗಾರಿ ವಿಳಂಬ ಕಾಣುತ್ತಿದೆಯಲ್ಲ ಎಂದು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಗಡ್ಕರಿ ಚಾಟಿ ಬೀಸಿದರು.

ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಒದಗಿಸಿದರೂ ಕಾಮಗಾರಿ ಇನ್ನೂ ಅರ್ಧದಷ್ಟೂ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೋರಿದ ವಿಳಂಬ ನೀತಿಯೇ ಕಾರಣ ಎಂದು ಸಚಿವರಿಬ್ಬರೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ 3.61 ಕಿ.ಮೀ ಉದ್ದದ ಈ ಫ್ಲೈ ಓವರ್ ಕಾಮಗಾರಿಗೆ ಸಿವಿಲ್ ಕಾಸ್ಟ್ ಆಗಿ ₹196.99 ಕೋಟಿ ನಿಗದಿಪಡಿಸಿದ್ದು, ಇದಕ್ಕೆ ಹೆಚ್ಚುವರಿ ₹35.76 ಕೋಟಿ ಸೇರಿಸಿ ₹ 232.75 ಕೋಟಿ ನಿಗದಿಪಡಿಸಲಾಗಿತ್ತು. ಒಟ್ಟು ಯೋಜನಾ ವೆಚ್ಚ ₹298 ಕೋಟಿ ನಿಗದಿಪಡಿಸಲಾಗಿತ್ತು. ಸಚಿವ ಪ್ರಲ್ಹಾದ್ ಜೋಶಿ ಅವರ ಒತ್ತಾಸೆಯಂತೆ ಈಗ ₹51.49 ಕೋಟಿ ಹೆಚ್ಚುವರಿ ಅನುದಾನ ನೀಡಲು ಗಡ್ಕರಿ ಸಮ್ಮತಿಸಿದ್ದಾರೆ. ಅದರಂತೆ ಒಟ್ಟು ಯೋಜನಾ ವೆಚ್ಚ ಈಗ ₹349.49 ಕೋಟಿ ತಲುಪಿದೆ.

ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ ಈ ಕಾರಿಡಾರ್ ಕಾಮಗಾರಿಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ವಿಶೇಷ ಹಣಕಾಸು ನೆರವು ನೀಡುವುದಾಗಿ ಗಡ್ಕರಿ ಇದೇ ವೇಳೆ ಭರವಸೆ ನೀಡಿದರು. ಅಲ್ಲದೇ, ಕೂಡಲೇ ಕಾಮಗಾರಿಗೆ ವೇಗ ನೀಡಿ ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಸಹ ನೀಡಿದರು. ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದರು.

ಹುಬ್ಬಳ್ಳಿಯ ಹೃದಯ ಭಾಗದಲ್ಲಿ ತೀವ್ರ ಜನಸಂದಣಿ ಉಂಟಾಗುತ್ತಿರುವ ಪರಿಣಾಮ ಸುಗಮ ಸಂಚಾರ ವ್ಯವಸ್ಥೆಗಾಗಿ ಕಿತ್ತೂರು ರಾಣಿ ವೃತ್ತದ ಬಳಿ ಫ್ಲೈ ಓವರ್ ಕಾಮಗಾರಿ ನಿರ್ಮಾಣಕ್ಕೆ 2020 ಆಗಸ್ಟ್ 31ರಂದೇ ಮಂಜೂರಾತಿ ನೀಡಿ, 2021ರ ಜೂನ್ 4ರಂದು ಚಾಲನೆ ನೀಡಲಾಗಿತ್ತು. 2024ರ ಮಾರ್ಚ್ 20ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು.

NH 63, NH 4 ಮತ್ತು NH 218 ರಿಂದ ಸಂಪರ್ಕ ಕಲ್ಪಿಸಲು ಒಟ್ಟು 3.61 ಕಿ.ಮೀ. ಉದ್ದದ ಎತ್ತರದ ಕಾರಿಡಾರ್ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಕಾಮಗಾರಿ ಕೈಗೊಂಡು ನಾಲ್ಕು ವರ್ಷ ಕಳೆದರೂ ಶೇ.50 ರಷ್ಟು ಮಾತ್ರ ಪೂರ್ಣಗೊಂಡಿದೆ. ಭೂ ಸ್ವಾಧೀನ ವಿಳಂಬ, ಪರ್ಯಾಯ ಮಾರ್ಗ ವ್ಯವಸ್ಥೆ ಹೀಗೆ ವಿವಿಧ ತೊಡಕುಗಳ ಕಾರಣಗಳಿಂದಾಗಿ ಇನ್ನೂ ಶೇ.50ರಷ್ಟು ಕಾಮಗಾರಿ ಬಾಕಿ ಉಳಿದಿದೆ.

ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಗಾಳಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಮತ್ತು NHPWD ಮುಖ್ಯ ಎಂಜಿನಿಯರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ