ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಸಲ್ಲಿಕೆಯಾಗುವ ಪ್ರಮಾಣಪತ್ರದಲ್ಲಿನ ದೋಷಗಳ ಕುರಿತಂತೆ ಪ್ರಜಾಪ್ರತಿನಿಧಿ ಕಾಯಿದೆಯಡಿ ದೂರು ಸಲ್ಲಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಮಾತ್ರ ಇರಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶೈಲೇಂದ್ರ ಬೆಳ್ದಾಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸ್ಪಷ್ಟನೆ ನೀಡಿದ್ದು, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ ಸಂಬಂಧ ದಾಖಲೆಗಳು ಹಾಗೂ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 125ಎ ಅಡಿಯಲ್ಲಿ ಚುನಾವಣಾ ಪ್ರಮಾಣ ಪತ್ರದಲ್ಲಿನ ದೋಷಗಳನ್ನು ಪ್ರಶ್ನಿಸಲು ಚುನಾವಣಾ ಆಯೋಗವೇ ದೂರು ದಾಖಲಿಸಬೇಕು. ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿ, ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿ ಆದೇಶಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಂಜುಳಾ ಲಿಂಬಾವಳಿ ಅವರು ಚುನಾವಣಾ ಪ್ರಮಾಣ ಪತ್ರದಲ್ಲಿ ತಾವು ಪಾಲುದಾರರಾಗಿರುವ ಸಂಸ್ಥೆಯ ಆಸ್ತಿಯನ್ನು ಮರೆ ಮಾಚಿದ್ದಾರೆ. ಜೊತೆಗೆ, ಅವರ ತಮ್ಮ ಅವಲಂಬಿತರ ವಿವರವನ್ನು ಕೊಡಬೇಕಾದ ಕಲಂಅನ್ನು ಖಾಲಿ ಬಿಟ್ಟಿದ್ದಾರೆ ಎಂದು ಆರೋಪಸಿ ನಲ್ಲೂರಳ್ಳಿ ನಾಗೇಶ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.
ಅದೇ ರೀತಿಯಲ್ಲಿ ಶೈಲೇಂದ್ರ ಬೆಳ್ದಾಳೆ ಅವರ ತಮ್ಮ ಗ್ರಾಮದ ಕುರಿತಂತೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ರಾಜಕುಮಾರ್ ಮಡ್ಕಿ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಈ ಎರಡೂ ಪ್ರಕರಣಗಳಲ್ಲಿ ಇಬ್ಬರೂ ಅರ್ಜಿದಾರರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.