ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿದ ಮೀನುಗಾರರ ಮೇಲೆ ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ಕಂಡುಬಂದಿದೆ. ಅಧಿಕಾರಿಗಳ ನಡೆ ಪ್ರಶ್ನಿಸಿದ ಸ್ಥಳೀಯರ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳಿಸಲಾಗುತ್ತಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಫೆಬ್ರವರಿ 25ರಂದು ಹೊನ್ನಾವರ ಕಾಸರಕೋಡು ಟೊಂಕದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೆಚ್‌ಪಿಪಿಎಲ್ ಖಾಸಗಿ ಕಂಪನಿ ಸರ್ವೆ ಕಾರ್ಯ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಸರ್ವೆ ಕಾರ್ಯವನ್ನು ಪ್ರತಿಭಟನೆ ಮೂಲಕ ಪ್ರಶ್ನಿಸಲು ಮುಂದಾದ ಸ್ಥಳೀಯ ಮೀನುಗಾರರು ಸೇರಿ ಮಹಿಳೆಯರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಇದಕ್ಕೆ ಅಸೋಸಿಯೇಶನ್ ಫಾರ್ ಪ್ರೊಟೆಕ್ಸನ್ ಆಫ್ ಸಿವಿಲ್ ರೈಟ್ (ಎಪಿಸಿಆರ್) ಸಂಘಟನೆ ಖಂಡನೆ ವ್ಯಕ್ತಪಡಿಸಿದೆ. ಜನಸಾಮಾನ್ಯರ ಪರವಾಗಿರಬೇಕಾದ ಸರ್ಕಾರ ಈ ರೀತಿಯಾಗಿ ದೌರ್ಜನ್ಯ ಎಸಗಿ ಬೀದಿಗೆ ತಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
''ಈ ಹಿಂದೆ ಈ ಭೂಮಿ ಸಮುದ್ರದಿಂದಾವರಿಸಿ ಕಣ್ಮರೆಯಾಗಿತ್ತು. ಅಲ್ಲಿನ ಜನರನ್ನು ಪರ್ಯಾಯ ಭೂಮಿಗೆ ಸ್ಥಳಾಂತರಿಸಿ ಹಕ್ಕುಪತ್ರ ನೀಡಲಾಗಿದೆ. ಆದರೆ ಇದೀಗ ಆ ಜಾಗದ ಸರ್ವೆ ನಂಬರ್ ಬದಲಿಸಿ, ಈ ಹಿಂದೆ ಹಕ್ಕು ಪತ್ರ ನೀಡಿದ ಭೂಮಿ ನದಿಯಾಗಿದೆ ಎಂದು ತೋರಿಸಲಾಗಿದೆ. ಆದರೆ ಈ ಹಿಂದೆ ಸರ್ಕಾರವೇ ಬಿಡುಗಡೆ ಮಾಡಿದ ನಕಾಶೆಯಲ್ಲಿ ಭೂಮಿ 303 ಸರ್ವೆ ನಂಬರ್ ಇದ್ದು, ಇದೀಗ 305 ಸರ್ವೆ ನಂಬರ್ ತೋರಿಸಿ ಖಾಸಗಿ ಬಂದರು ಅಭಿವೃದ್ಧಿಗೆ ನೀಡಲಾಗಿದೆ'' ಎಂದು ಹೈಕೋರ್ಟ್ ನಿವೃತ್ತ ಎಸ್ಪಿಪಿ ಬಿ.ಟಿ.ವೆಂಕಟೇಶ ಆರೋಪಿಸಿದ್ದಾರೆ.
''ಹಿಂದೆ ಸಮುದ್ರದಿಂದ ಆವರಿಸಿದ ಭೂಮಿ ಈಗ ಮತ್ತೆ ಕಾಣುತ್ತಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಅದಕ್ಕೆ ಪ್ರತ್ಯೇಕ ಸರ್ವೆ ನಂಬರ್ ನೀಡಿದ್ದಾರೆ. ಅಲ್ಲದೇ, ಸರ್ಕಾರದ ದಿಶಾಂಕ ಆ್ಯಪ್ನಲ್ಲಿ ಕಾಸರಕೋಡು, ಟೊಂಕದ ಗ್ರಾಮದ ಹೆಸರೇ ನಮೂದಿಲ್ಲ. ಅಲ್ಲದೇ, ಹೊನ್ನಾವರದ ನದಿ ಮತ್ತು ಸಮುದ್ರದ ಸಂಗಮ ಸ್ಥಳವೇ ಕಾಣಿಸುತ್ತಿಲ್ಲ. ಹೀಗಾಗಿ, ಅಧಿಕಾರಿಗಳ ನಡೆ ಸಂಶಯ ಹೆಚ್ಚಿಸಿದೆ. ವಿನಾಃಕಾರಣ ವಾಣಿಜ್ಯ ಬಂದರು ಯೋಜನೆಗಾಗಿ ಅಧಿಕಾರಿಗಳು ಸ್ಥಳೀಯರ ಬದುಕಿನ ಬಗ್ಗೆ ವಿಚಾರ ಮಾಡದೇ ಅನ್ಯಾಯ ಮಾಡುತ್ತಿದ್ದಾರೆ. ಯಾವುದೇ ನೋಟಿಸ್ ನೀಡದೇ ಅವರಿಗೆ ಭಯ ಹುಟ್ಟಿಸುತ್ತಿದ್ದಾರೆ. ಹೋರಾಟಗಾರರ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳಿಸಲಾಗಿದೆ. ಇದು ಸ್ಥಳೀಯರನ್ನು ಭಯ ಬೀಳಿಸುವ ಯತ್ನವಾಗಿದೆ. ಸರ್ಕಾರದ ಆದಷ್ಟು ಬೇಗ ಕೇಸ್ ವಾಪಸ್ ತೆಗೆದುಕೊಳ್ಳಬೇಕು. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲಾಗುವುದು'' ಎಂದು ಎಪಿಸಿಆರ್ ಸಂಘಟನೆ ಕಾರ್ಯದರ್ಶಿ ಹುಸೈನ್ ಕೊಡಿಬೆಂಗ್ರೆ ಎಚ್ಚರಿಕೆ ನೀಡಿದ್ಧಾರೆ.