ರಾಮನಗರ: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕ ಹಿನ್ನೆಲೆಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ರೈತರ ಭೂಮಿ ಕಸಿದುಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಕೆಲಸ ಆಗುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೋರಾಟ ನಡೆಸುವ ಸಂಬಂಧ ರಾಮನಗರದ ಬಿಡದಿ ಬಳಿಯ ಹೊಸೂರಿನ ಮದ್ದೂರಮ್ಮ ದೇವಸ್ಥಾನದ ಬಳಿ ಮಂಗಳವಾರ ರೈತರಿಂದ ಸಭೆ ಹಮ್ಮಿಕೊಳ್ಳಲಾಗಿತ್ತು. ಬಿಡದಿ ಭಾಗದ 9,600 ಎಕರೆ ಭೂಮಿ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಒಟ್ಟು 24 ಗ್ರಾಮಗಳು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಒಳಪಡಲಿದ್ದು, ಗ್ರೇಟರ್ ಬೆಂಗಳೂರು ಯೋಜನೆ ಅನುಷ್ಠಾನಗೊಂಡರೆ 10 ಗ್ರಾಮಗಳನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂದು ಆತಂಕ ಹೊರಹಾಕಿದ ರೈತರು, ಜಮೀನು ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು.
2006ರಲ್ಲಿ ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಮುಂದಾಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು, ರೈತರ ಭೂಮಿ ರೆಡ್ ಜೋನ್ಗೆ ಸೇರ್ಪಡೆ ಮಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಯೋಜನೆಯಲ್ಲಿ ಅಭಿವೃದ್ಧಿ ನೆಪದಲ್ಲಿ ರೈತರ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಪರ, ವಿರೋಧ ಚರ್ಚೆಯಾಗಿ, ಮಾತಿನ ಚಕಮಕಿಯೂ ನಡೆಯಿತು.
ಹೊಸೂರು ಗ್ರಾಮಸ್ಥ ಪ್ರಕಾಶ್ ಎಂಬವರು ಮಾಧ್ಯಮದವರೊಂದಿಗೆ ಮಾತನಾಡಿ, ''ಕಂಚುಗಾರನಹಳ್ಳಿ ಹಾಗೂ ಭೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಒಟ್ಟು 9,600 ಎಕರೆ ಜಮೀನನ್ನು ರೈತರ ಒಪ್ಪಿಗೆ ಹಾಗೂ ಅಭಿಪ್ರಾಯ ಪಡೆಯದೇ ಏಕಾಏಕಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿನ ಶೇ.90ರಷ್ಟು ಭೂಮಿಯು ವ್ಯವಸಾಯಕ್ಕೆ ಯೋಗ್ಯವಾದದ್ದಾಗಿದೆ. ತೋಟಗಾರಿಗೆ ಬೆಳೆ ಬೆಳೆಯುವ ಜಮೀನುಗಳಾಗಿವೆ. ಕೆಎಂಎಫ್ಗೆ ಇಲ್ಲಿನ ರೈತರು ಸುಮಾರು 6,000 ಲೀಟರ್ ಹಾಲನ್ನು ಪೂರೈಕೆ ಮಾಡುತ್ತೇವೆ. ಜೊತೆಗೆ, ಬೆಂಗಳೂರಿನ ಸಮೀಪದಲ್ಲಿ ಲಕ್ಷಾಂತರ ಮರಗಿಡಗಳಿರುವ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವಂತಹ ಜಮೀನು ಎಲ್ಲಿಯೂ ನೋಡಲು ಸಿಗುವುದಿಲ್ಲ'' ಎಂದರು.
''ಇಲ್ಲಿ ಸುಮಾರು 3,500 ಎಕರೆ ತೆಂಗಿನ ತೋಟವೇ ಇದೆ. 2,500 ಎಕರೆಯಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಇನ್ನುಳಿದಂತೆ, ಮಾವು ಹಾಗೂ ಸಪೋಟವನ್ನೂ ಬೆಳೆಯಲಾಗುತ್ತಿದೆ. ಎಲ್ಲವೂ ನೀರಾವರಿ ಬೆಳೆಗಳಾಗಿವೆ. ಇಲ್ಲಿ ಪಶ್ಚಿಮ ಭಾಗಕ್ಕೆ ವೃಷಭಾವತಿ ಹಾಗೂ ಪೂರ್ವ ಭಾಗದಲ್ಲಿ ಸುವರ್ಣಮುಖಿ ನದಿಗಳಿರುವುದರಿಂದ, ಅವುಗಳ ಮಧ್ಯ ಭಾಗದಲ್ಲಿರುವ ನಮಗೆ ವ್ಯವಸಾಯಕ್ಕೆ ಅತ್ಯಂತ ಯೋಗ್ಯವಾದ ಭೂಮಿ ಇದು. ಹೀಗಾಗಿ, ಇದನ್ನು ಬಿಟ್ಟು ವ್ಯವಸಾಯಕ್ಕೆ ಯೋಗ್ಯವಲ್ಲದ ಒಣ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದು ಒಳ್ಳೆಯದು. ಆದರೆ ತೋಟಗಾರಿಕಾ ಬೆಳೆಗಳ ಜಮೀನನ್ನು ವಶಕ್ಕೆ ಪಡೆಯುತ್ತಿದ್ದಾರೆ. ಜಮೀನನ್ನು ಖಾಸಗಿ ಕಂಪನಿಗೆ ಕೊಡಬೇಕೆಂಬ ಹುನ್ನಾರದಿಂದ ಈ ಕೆಲಸ ನಡೆಯುತ್ತಿದೆ'' ಎಂದು ಪ್ರಕಾಶ್ ಆಕ್ರೋಶ ಹೊರಹಾಕಿದರು.
''ನಾವು ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಕೈಗಾರಿಕಾ ಪ್ರದೇಶಗಳ ನಡುವೆ ಇದ್ದು, ಬೆಂಗಳೂರಿಗೂ ಹತ್ತಿರವಿರುವುದರಿಂದ ಇಲ್ಲಿನ ಭೂಮಿಗೆ ಚಿನ್ನದ ಬೆಲೆಯಿದೆ. ಆದರೆ ಇವರು ನೀಡುವ ಪರಿಹಾರ ನಮಗೆ ಯಾವುದಕ್ಕೂ ಸಾಕಾಗಲ್ಲ. ಮೂರು ರಾಜಕೀಯ ಪಕ್ಷದವರೂ ಸೇರಿಕೊಂಡು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಲಕ್ಷಗಟ್ಟಲೇ ಮರಗಳನ್ನು ಕಡಿಯಲು ಮುಂದಾಗಲಾಗಿದೆ. ದಯವಿಟ್ಟು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಬೇಕು'' ಎಂದು ಮನವಿ ಮಾಡಿದರು.