ರಾಮನಗರ: "ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಂದೆ-ತಾಯಿ, ಗ್ಯಾರಂಟಿಗಳೇ ಬಂಧು-ಬಳಗ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಕನಕಪುರ ತಾಲೂಕಿನ ಭೂಹಳ್ಳಿ ಹೊಸಕೆರೆ ಬಳಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
"ನನ್ನ ಕ್ಷೇತ್ರಕ್ಕೆ ಸುಮಾರು 400 ಕೋಟಿ ರೂ.ಗಳಷ್ಟು ಅನುದಾನ ತಂದಿದ್ದೇನೆ. ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು. 250 ಕೋಟಿ ರೂ ಮೊತ್ತದ ಕಾಮಗಾರಿಗಳು ನೀರಾವರಿ ಇಲಾಖೆಯಿಂದಲೇ ನಡೆಯುತ್ತಿದೆ" ಎಂದರು.
"ಪಾದ್ದರೆಯಿಂದ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದವರೆಗೆ ಸುಮಾರು 13 ಕೋಟಿ ರೂ ವೆಚ್ಚದಲ್ಲಿ ರಸ್ತೆ, ದೊಡ್ಡ ಆಲಹಳ್ಳಿಯಿಂದ ಕಬ್ಬಾಳಿನ ತನಕ 40 ಕೋಟಿ ರೂ ವೆಚ್ಚದಲ್ಲಿ 14.5 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಇದರಿಂದ ನಮ್ಮ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಕನಕಪುರ, ಸಾತನೂರು, ದೊಡ್ಡ ಆಲಹಳ್ಳಿ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ನಗುತ್ತಿದ್ದರು. ಆದರೆ ಇಂದು ಕೆಲಸ ಮಾಡಿ ತೋರಿಸಿದ್ದೇವೆ. ರಸ್ತೆ ಅಭಿವೃದ್ಧಿಗೆ 135 ಕೋಟಿ ರೂ, ಹೊಸಕೆರೆ ತುಂಬಿಸಲು 108 ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ನಲ್ಲಳ್ಳಿ- ಮುಲ್ಲಳ್ಳಿ ಸಂಪರ್ಕ ಸೇತುವೆಗೆ 11 ಕೋಟಿ, ಅರ್ಕಾವತಿಯಿಂದ ನೀರನ್ನು ಎತ್ತಿ ದೊಡ್ಡ ಆಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸೂಕ್ಷ್ಮ ನೀರಾವರಿ ಕಲ್ಪಿಸಲು 70 ಕೋಟಿಯ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ 8 ಗ್ರಾಮಗಳ 2 ಸಾವಿರ ಎಕರೆ ಭೂಮಿಗೆ ಉಪಯೋಗವಾಗಲಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ಕೊಕ್ಕರೆ ಹೊಸಹಳ್ಳಿ ಬಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 10 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ" ಎಂದು ಡಿಕೆಶಿ ಮಾಹಿತಿ ನೀಡಿದರು.
ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮ: "ನನ್ನ ಕ್ಷೇತ್ರದಲ್ಲಿ ಎಷ್ಟು ಕೆರೆಗಳನ್ನು ತುಂಬಿಸಲು ಸಾಧ್ಯವೋ ಅಷ್ಟು ಕೆರೆಗಳನ್ನು ತುಂಬಿಸುತ್ತೇನೆ. ಹಂತ ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ. ಅಧಿಕಾರ ಅವಧಿಯಲ್ಲಿ ಎಲ್ಲಾ ಕಡೆ ನೀರು ತುಂಬಿ ಹರಿಯಬೇಕು. ಚನ್ನಪಟ್ಟಣ, ರಾಮನಗರ, ಮಾಗಡಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಲಾಗಿದೆ. ಅಲ್ಲಿನ ಜನಕ್ಕೂ ನಾನು ಕೆಲಸ ಮಾಡಿಸುವುದಾಗಿ ಮಾತು ಕೊಟ್ಟಿದ್ದೇನೆ. ಮೇಕೆದಾಟು ಕಚೇರಿ ಪ್ರಾರಂಭ ಮಾಡಲಾಗಿದ್ದು, ಎಷ್ಟು ಜಮೀನು ಮುಳುಗಡೆಯಾಗುತ್ತದೆ ಎಂದು ಅಂದಾಜು ಮಾಡಲು ಕಂದಾಯ ಹಾಗೂ ಅರಣ್ಯ ಅಧಿಕಾರಿಗಳು ಕೆಲಸ ಪ್ರಾರಂಭ ಮಾಡಿದ್ದಾರೆ. ಕಾವೇರಿ ನದಿಯಿಂದ ನೀರನ್ನು ತಂದು ಜನರ ಬದುಕನ್ನು ಬದಲಾವಣೆ ಮಾಡುವ ದೊಡ್ಡ ಕೆಲಸ ನಡೆಯುತ್ತಿದೆ" ಎಂದರು.
"ಚೀನಾದಿಂದ ರೇಷ್ಮೆ ಆಮದು ಕಡಿಮೆಯಾಗಿದೆ. ಆದ ಕಾರಣಕ್ಕೆ ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ಅದಕ್ಕೆ ಯಾರೂ ಸಹ ಭೂಮಿಯನ್ನು ಮಾರಾಟ ಮಾಡಲು ಹೋಗಬೇಡಿ. ಮುಂದಕ್ಕೆ ನಿಮ್ಮ ಭೂಮಿಯ ಬೆಲೆ ಹೆಚ್ಚಲಿದೆ. ಶಿಡ್ಲಘಟ್ಟ ಭಾಗದಲ್ಲಿ ನಮಗಿಂತ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಸಿಲ್ಕ್ ಮತ್ತು ಮಿಲ್ಕ್ ಅನ್ನು ಕೋಲಾರ ಭಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ" ಎಂದರು.
"ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ಸಾತನೂರು ಹೋಬಳಿಯನ್ನು ರಾಮನಗರಕ್ಕೆ ಸೇರಿಸಲು ಹೊರಟಿದ್ದರು. ಕನಕಪುರದಲ್ಲಿಯೇ ಸಾತನೂರನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳೀಯ ಮುಖಂಡರಿಂದ ದೊಡ್ಡ ಹೋರಾಟ ನಡೆದ ಕಾರಣಕ್ಕೆ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕ್ಷೇತ್ರ ಪುನರ್ ವಿಂಗಡಣೆ ವೇಳೆ ಎಸ್.ಎಂ.ಕೃಷ್ಣ ಅವರು ಹಾಗೂ ಕುಲದೀಪ್ ಸಿಂಗ್ ಅವರ ಪ್ರಯತ್ನದ ಫಲವಾಗಿ ಈ ಹೋಬಳಿ ಕನಕಪುರದಲ್ಲಿಯೇ ಉಳಿಯಿತು. ಕಾವೇರಿ ಸಂಗಮದಿಂದ ನೀರು ತಂದು ಈ ಭಾಗದ 21 ಕೆರೆಗಳಿಗೆ ತುಂಬಿಸುವ ಯೋಜನೆ ನನಗೆ ತೃಪ್ತಿ ನೀಡುತ್ತಿದೆ" ಎಂದು ಡಿಕೆಶಿ ಹೇಳಿದರು.