ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮವಾದ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾವಿರ ಕೋಟಿ ವೆಚ್ಚದಲ್ಲಿ ಕಲ್ಯಾಣ ಪಥ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಜೇವರ್ಗಿ ಪಟ್ಟಣದಲ್ಲಿ ಆಯೋಜಿಸಿದ್ದ ಕಲ್ಯಾಣ ಪಥ ಬೃಹತ್ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ಸಿಂಗ್ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಡಿಕೆಶಿ ಮಾತನಾಡಿ ನಾನು ಶಾಸಕ, ಸಚಿವ ಮತ್ತು ಲೋಕಸಭೆ ಸದಸ್ಯನಾಗಿ, ರಾಜ್ಯಸಭಾ ಸದಸ್ಯನಾಗಿ ಈಗ ಎಐಸಿಸಿ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವುದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ. ನೀವು (ಮತದಾರರು) ಒಮ್ಮೊಮ್ಮೆ ದಾರಿ ತಪ್ಪುತ್ತೀರಿ ಅದು ಕೆಲಸ ಮಾಡುವವರಿಗೆ ಅಡ್ಡಗಾಲು ಹಾಕಿದಂತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸ್ಥಾಪನೆಗೆ ಒತ್ತಿ ಹೇಳಿದ ಖರ್ಗೆ, ಬೀದರ್, ಕಲಬುರಗಿ ಹಾಗು ಬಳ್ಳಾರಿಯಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಗಳಿಲ್ಲ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರ ಈ ಯೋಜನೆಗಳಿಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಂಡು ಕೊಡಬೇಕು. ಈ ಮಾತು ಶಿವಕುಮಾರ್ ಅವರಿಗೆ ಯಾಕೆ ಹೇಳುತ್ತಿದ್ದೇನೆ ಎಂದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ ಜೊತೆಯಾಗಿ ಹೋದರೆ ಮಾತ್ರ ನಮ್ಮ ಕೆಲಸ ಆಗುತ್ತದೆ. ಹಳೆ ಮೈಸೂರು ಹಾಗೂ ಮಲೆನಾಡಿನ ಜನರು ಅರ್ಜಿ ಕೊಟ್ಟು ಯಾಕೆ ಕೆಲಸ ಮಾಡಿಲ್ಲ ಅಂತ ಪ್ರಶ್ನೆ ಮಾಡುತ್ತಾರೆ. ಆದರೆ, ನಮ್ಮ ಭಾಗದ ಜನರು ಯಾಕೆ ಕೆಲಸ ಆಗಿಲ್ಲ ಎಂದು ಕೈಮುಗಿಯುತ್ತಾರೆ ಅಷ್ಟೊಂದು ಮುಗ್ಧರು. ಅಲ್ಲದೆ ನಿಮಗೆ ಶಕ್ತಿ ತುಂಬಿದ್ದೇ ನಮ್ಮ ಭಾಗದ ಜನರು. ನಿಮಗೆ ಶಕ್ತಿ ತುಂಬಿದವರಿಗೆ ನೀವು ಕೆಲಸ ಮಾಡಿ. ಎಲ್ಲ ಕೆಲಸಗಳನ್ನು ಮೈಸೂರಿನಿಂದ ಪ್ರಾರಂಭ ಮಾಡಬೇಡಿ. ಕಲ್ಯಾಣದಿಂದ ಪ್ರಾರಂಭಿಸಿ ನಿಮ್ಮ ಕಲ್ಯಾಣವಾಗುತ್ತದೆ. ಕಲ್ಯಾಣದಿಂದ ಕೆಲಸ ಪ್ರಾರಂಭಿಸಿದರೆ ಅದು ಕೊಳ್ಳೆಗಾಲದವರೆಗೆ ಹೋಗುತ್ತದೆ ಆದರೆ ಮೈಸೂರಿನಿಂದ ಪ್ರಾರಂಭಿಸಿದ ಕೆಲಸ ಬೆಂಗಳೂರಿಗೆ ಬಂದು ನಿಲ್ಲುತ್ತಿದೆ ಎಂದರು.