ಶಿವಮೊಗ್ಗ: ರಾಜ್ಯದಲ್ಲಿ ಮಲೆನಾಡು ಸೇರಿದಂತೆ 10 ಜಿಲ್ಲೆಗಳ ಭಾಗದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಡಲಾಂಭಿಸಿದ್ದು, ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈ ಸಾರಿಯ ಬಜೆಟ್ನಲ್ಲಿ ಘೋಷಣೆ ಮಾಡಿರುವ ಹಣ ಸಾಲದು ಎಂದು ಸ್ಥಳೀಯ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಡಕೆ ಬೆಳೆಗಾರರನ್ನು ಕಳೆದ ಐದಾರು ವರ್ಷಗಳಿಂದ ಹಿಂಡಿ ಹಿಪ್ಪೆ ಮಾಡುತ್ತಿರುವ ರೋಗ ಅಂದ್ರೆ, ಎಲೆ ಚುಕ್ಕೆ ರೋಗ. ಈ ರೋಗದಿಂದ ಹತ್ತಾರು ವರ್ಷ ಬೆಳೆಸಿದ ಅಡಕೆ ಮರಗಳು ನಾಶವಾಗಿ ಹೋಗುತ್ತಿವೆ. ಇದರಿಂದ ಅಡಕೆ ಬೆಳೆಗಾರ ಸಂಕಷ್ಟಕ್ಕೆ ಈಡಾಗಿದ್ದಾನೆ. ಈ ರೋಗ ಪ್ರತಿ ವರ್ಷ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಈ ರೋಗ ಹರಡಿದೆ. ಈ ಸಲದ ಬಜೆಟ್ನಲ್ಲಿ ರಾಜ್ಯ ಸರ್ಕಾರ ಎಲೆ ಚುಕ್ಕೆ ರೋಗಕ್ಕೆ 62 ಕೋಟಿ ರೂ. ಘೋಷಣೆ ಮಾಡಿದೆ. ರಾಜ್ಯ ಸರ್ಕಾರವೇ ಹೇಳಿರುವಂತೆ 2 ಲಕ್ಷ ಅಡಕೆ ಬೆಳೆಗಾರರು ಇದರ ಸಮಸ್ಯೆಗೆ ಒಳಗಾಗಿದ್ದಾರೆ. ಇದರಿಂದ 62 ಕೋಟಿ ಹಣ ಎಷ್ಟರ ಮಟ್ಟಿಗೆ ಸಹಾಯಕವಾಗುತ್ತದೆ ಎಂಬುದರ ಬಗ್ಗೆ ಅಡಕೆ ಬೆಳೆಗಾರರು ಮಾತನಾಡಿದ್ದಾರೆ.
ಜಿಲ್ಲೆಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರ ಎಲೆ ಚುಕ್ಕಿ ರೋಗಕ್ಕೆ ಹಣ ಘೋಷಣೆ ಮಾಡಿರುವುದು ಸ್ವಾಗರ್ತ. ಆದರೆ, ಇದು ರೈತರಿಗೆ ಯಾವುದೇ ಅನುಕೂಲವಾಗಲ್ಲ. ಸರ್ಕಾರ ಕನಿಷ್ಠ 300 ಕೋಟಿ ರೂ. ಬಿಡುಗಡೆ ಮಾಡಿದರೆ ಮಾತ್ರ ಅಡಕೆ ಬೆಳೆಗಾರರಿಗೆ ಸಹಾಯಕವಾಗುತ್ತದೆ. 10 ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಅಡಕೆ ಬೆಳೆಗೆ ಎಲೆ ಚುಕ್ಕೆ ರೋಗ ಹರಡಿದೆ. ಇದರಿಂದ ಇದಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ. ಇನ್ನೂ ಬಜೆಟ್ ಮೇಲಿನ ಚರ್ಚೆ ಇರುವುದರಿಂದ ಇದರ ಮೊತ್ತ ಹೆಚ್ಚಾಗಬಹುದೆಂಬ ಆಶಾಭಾವನೆಯಲ್ಲಿದ್ದೇವೆ. ಇದರ ಜೊತೆ ರೋಗ ಹರಡುವಿಕೆ, ನಿಯಂತ್ರಣ ಹಾಗೂ ಔಷಧ ಕುರಿತು ಸಮಗ್ರವಾದ ಸಂಶೋಧನೆ ಆಗಬೇಕಿದೆ ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 21 ಸಾವಿರ ಹೆಕ್ಟೇರ್ನಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಸತತ ಮಳೆಯಿಂದ 31 ಸಾವಿರ ಹೆಕ್ಟೇರ್ ಪ್ರದೇಶ ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿದೆ. ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ಭಾಗದಲ್ಲಿ ಎಲೆ ಚುಕ್ಕಿ ರೋಗ ಹೆಚ್ಚಾಗಿದೆ. ಮಳೆಗಾಲದಲ್ಲಿ ಕೊಳೆ ರೋಗ ಬಾಧಿಸಿದರೆ, ಈಗ ಎಲೆ ಚುಕ್ಕಿ ರೋಗ ಬಾಧಿಸುತ್ತಿದೆ. ಇದಕ್ಕೆ ಸಮಗ್ರವಾದ ಸಂಶೋಧನೆ ನಡೆದು ರೋಗಕ್ಕೆ ಔಷಧಿ ಕಂಡು ಹಿಡಿಯಬೇಕಿದೆ ಅನ್ನೋದು ಅವರ ಬೇಡಿಕೆ.