ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹೋಗಿ ಧರ್ಮ, ಧರ್ಮಗಳ ನಡುವೆ ವಿಭಜನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೂಗಳು, ಮುಸಲ್ಮಾನರನ್ನು ಒಡೆಯುವ ಕೆಲಸಕ್ಕೆ ಇವರು ಕೈ ಹಾಕಿದ್ದಾರೆ. ಮದರಸಾಕ್ಕೆ ಹಣ ಕೊಟ್ಟಿದ್ದಾರೆ. ಮೌಲ್ವಿಗಳ ಹಣ ಹೆಚ್ಚಿಸಿದ್ದಾರೆ. ಮುಸ್ಲಿಮರ ಮದುವೆಗೆ 50 ಸಾವಿರ ನೀಡಿದ್ದಾರೆ. ಹಾಗಿದ್ದರೆ, ಹಿಂದೂಗಳಲ್ಲಿ ಬಡವರಿಲ್ಲವೇ? ಮುಖ್ಯಮಂತ್ರಿಗಳಿಗೆ ಯಾಕೆ ಈ ದುರ್ಬುದ್ಧಿ ಎಂದು ರಾಜ್ಯದಲ್ಲಿ ಪ್ರತಿಯೊಬ್ಬರೂ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
ಈ ಬಜೆಟ್ ಸಿದ್ದರಾಮಯ್ಯ ಮಂಡಿಸಿಲ್ಲ, ಸಚಿವ ಜಮೀರ್ ಅಹ್ಮದ್ ಖಾನ್ ಅವರೇ ಮಂಡಿಸಿದರೆ ಎಂಬ ಅನುಮಾನ ನನಗಿದೆ. ಸಿದ್ದರಾಮಯ್ಯ ಕೊನೆಯ ಬಜೆಟ್ ತೀರಾ ನಿರಾಶಾದಾಯಕವಾಗಿದೆ. ಬಜೆಟ್ನಿಂದ ರಾಜ್ಯದ ಕೃಷಿಕರು, ಕೃಷಿ ಕ್ಷೇತ್ರ, ಯುವಕರು, ಮಹಿಳೆಯರು, ಬಡವರಿಗೆ ಯಾವುದೇ ಅನುಕೂಲ ಆಗಲಾರದು. ಇದು ಅಭಿವೃದ್ಧಿಗೆ ಪೂರಕವಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತರ ಬಗೆಗಿನ ಪ್ರೀತಿ, ಕಾಳಜಿ ಎಲ್ಲರಿಗೂ ಗೊತ್ತಿದೆ. ಆದರೆ, ಹಣಕಾಸಿನ ಸಚಿವರಾಗಿ ಅವರು ಈ ಮಟ್ಟಕ್ಕೆ ಇಳಿಯುವರೆಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುಸ್ಲಿಂ ವಿದ್ಯಾರ್ಥಿಗಳಿಗೆ ಹೊರದೇಶಕ್ಕೆ ಹೋಗಲು ಕೊಡುವ ಮೊತ್ತವನ್ನು 20 ಲಕ್ಷದಿಂದ 30 ಲಕ್ಷಕ್ಕೆ ಏರಿಸಿದ್ದಾರೆ. ಯಾಕೆ ಹಿಂದೂಗಳಲ್ಲಿ ಯಾರಿಗೂ ಕೊಡಬೇಕೆಂದು ನಿಮಗೆ ಅನಿಸಲಿಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಸ್ವರಕ್ಷಣಾ ಕಲೆ ತರಬೇತಿಗೆ ಮುಸ್ಲಿಂ ಮಹಿಳೆಯರಿಗೆ ಹಣ ಮೀಸಲಿಟ್ಟಿದ್ದಾರೆ. ಯಾಕೆ ಸಿದ್ದರಾಮಯ್ಯನವರೇ, ಹಿಂದೂಗಳಲ್ಲಿರುವ ಮಹಿಳೆಯರಿಗೆ ಆತ್ಮಸ್ಥೈರ್ಯ ಕೊಡುವ ಸ್ವರಕ್ಷಣಾ ಕಲೆ ತರಬೇತಿ ಪಡೆಯಲು ಯೋಜನೆ ಕೊಡಬೇಕು ಎಂದು ಅನಿಸಿಲ್ಲವೇ? ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿಲ್ಲ ಎಂಬುದನ್ನು ಬಿಟ್ಟರೆ, ಇನ್ನೆಲ್ಲ ಅಂಶಗಳು ಈ ಬಜೆಟ್‍ನಲ್ಲಿವೆ ಎಂದು ವಿಜಯೇಂದ್ರ ಟೀಕಿಸಿದರು.
ಪರಿಶಿಷ್ಟರಿಗೆ ಮೀಸಲಿಟ್ಟ ಎಸ್ಸಿಪಿ, ಟಿಎಸ್‍ಪಿ ಹಣದಲ್ಲಿ 25 ಸಾವಿರ ಕೋಟಿಯನ್ನು ಬೇರೆ ಬೇರೆ ಕಾರ್ಯಕ್ಕೆ ವರ್ಗಾವಣೆ ಮಾಡಿದ್ದಾರೆ. ಸಾಲ 1 ಲಕ್ಷ 16 ಸಾವಿರ ಕೋಟಿಗೆ ಏರಿದೆ. ಮೊದಲ ಬಜೆಟ್‍ನಲ್ಲಿ ಮಿಗತೆ ಆಯವ್ಯಯ ಪತ್ರ ಕೊಟ್ಟಿದ್ದ ಸಿದ್ದರಾಮಯ್ಯನವರು, ತಮ್ಮ ಅಂತಿಮ ಬಜೆಟ್ ವೇಳೆ ಬೃಹತ್ ಪ್ರಮಾಣದ ಸಾಲ ಮಾಡಿದ್ದಾರೆ ಎಂದು ವಿಜಯೇಂದ್ರ ಹರಿಹಾಯ್ದರು.