ಬೆಂಗಳೂರು: ರಾಜ್ಯದಲ್ಲಿ ಸಹಾಯ ಧನಗಳು ಇತರ ರಾಜ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿವೆ. ಮತ್ತು ಅದರೊಳಗೆ ಅರ್ಹವಲ್ಲದ ಸಹಾಯ ಧನಗಳು ದೊಡ್ಡದಾಗಿ ಕಾಣಿಸುತ್ತವೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಸಂಪನ್ಮೂಲಗಳನ್ನು ಬೆಳವಣಿಗೆ ಮತ್ತು ಅಭಿವೃದ್ಧಿ ಉದ್ದೇಶಗಳಿಗೆ ಬಳಸಲು ಅರ್ಹವಲ್ಲದ ಸಹಾಯ ಧನಗಳ ತ್ವರಿತ ತರ್ಕಬದ್ಧಗೊಳಿಸುವಂತೆ ಸಲಹೆ ನೀಡಿದೆ. ಪ್ರತಿವರ್ಷ ವೆಚ್ಚದ ಪ್ರಮಾಣ ಹೆಚ್ಚುತ್ತಿದೆ. ಒಟ್ಟು ವೆಚ್ಚದಲ್ಲಿ ಬದ್ಧತಾ ವೆಚ್ಚಗಳ ಪಾಲು ಹೆಚ್ಚಾಗಿದೆ. ಬದ್ಧ ವೆಚ್ಚ ಸಂಬಳ, ಪಿಂಚಣಿ, ಬಡ್ಡಿ, ಸಹಾಯ ಧನ, ಆಡಳಿತಾತ್ಮಕ ವೆಚ್ಚಗಳು, ಪಂಚಾಯತ್‌ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಇತ್ಯಾದಿಗಳನ್ನು ಒಳಗೊಂಡಿದೆ.
ಬದ್ಧ ವೆಚ್ಚ ಹೆಚ್ಚಳ ಅಭಿವೃದ್ಧಿ ಉದ್ದೇಶಕ್ಕಾಗಿ ಇರುವ ಸಂಪನ್ಮೂಲವನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ವಿತ್ತೀಯ ಹೊಣೆಗಾರಿಕೆ ಶಾಸನಗಳ ಅನ್ವಯ ಗುರಿ ಸಾಧಿಸಲು ಮತ್ತು ರಾಜ್ಯವು ಬಾಕಿ ಇರುವ ಹೊಣೆಗಾರಿಕೆಗಳನ್ನು ಕಡಿಮೆ ಮಾಡಲು ರಾಜಸ್ವ ಜಮೆಗಳಲ್ಲಿ ಬದ್ಧತಾ ವೆಚ್ಚದ ಪಾಲನ್ನು ಕಡಿಮೆ ಮಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ವಿವರಿಸಿದೆ.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಬಗ್ಗೆ 2024ರ ಫೆ.26 ರಿಂದ ಮಾ.15 ರವರೆಗೆ ನಡೆಸಿದ ಬೃಹತ್ ಸಮೀಕ್ಷೆಯಲ್ಲಿ ಶೇ.90ರಷ್ಟು ಅನ್ನಭಾಗ್ಯ ಫಲಾನುಭವಿಗಳು ದ್ವಿದಳ ಧಾನ್ಯ, ಅಡುಗೆ ಎಣ್ಣೆ ಇತ್ಯಾದಿ ಆಹಾರ ಪದಾರ್ಥಗಳನ್ನೂ ರಾಜ್ಯ ಸರ್ಕಾರ ಒದಗಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಆರ್ಥಿಕ ಸಮೀಕ್ಷೆ 2024-25ರಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಫೆ.26 ರಿಂದ ಮಾ.15ರವರೆಗೆ 1.25 ಲಕ್ಷ ಎನ್ಯುಮರೇಟರ್ (ಸಮೀಕ್ಷೆಗೆ ನೇಮಕಗೊಂಡಿದ್ದ ಸಿಬ್ಬಂದಿ) ವಿಸ್ತೃತ ಸಮೀಕ್ಷೆ ನಡೆಸಿದ್ದಾರೆ.
ಈ ವೇಳೆ ಗೃಹ ಜ್ಯೋತಿಯ 67.84 ಲಕ್ಷ ಫಲಾನುಭವಿ, ಗೃಹಲಕ್ಷ್ಮೀ ಯೋಜನೆಯ 77.21 ಲಕ್ಷ ಫಲಾನುಭವಿ, ಅನ್ನಭಾಗ್ಯ ಯೋಜನೆಯ 1.15 ಕೋಟಿ ಫಲಾನುವಭಿಗಳು, ಯುವನಿಧಿ 5.23 ಲಕ್ಷ ಫಲಾನುಭವಿಗಳ ಸಮೀಕ್ಷೆ ನಡೆಸಲಾಗಿದೆ. ಈ ವೇಳೆ ಯೋಜನೆಗಳನ್ನು ಎಲ್ಲಾ ಫಲಾನುಭವಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಗೃಹಜ್ಯೋತಿಯ ಶೇ.80 ರಷ್ಟು ಹಾಗೂ ಗೃಹಲಕ್ಷ್ಮೀಯ ಶೇ.76 ರಷ್ಟು ಫಲಾನುಭವಿಗಳು ಯೋಜನೆಯಿಂದ ಉಳಿತಾಯ ಆದ ಹಣವನ್ನು ಹಣ್ಣು, ತರಕಾರಿ, ಶಾಲೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ ಹಾಗೂ ಗೃಹ ವೆಚ್ಚಗಳಿಗೆ ಬಳಸುವುದಾಗಿ ತಿಳಿಸಿದ್ದಾರೆ.