image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಶ್ವವಿದ್ಯಾಲಯಗಳ ಮುಚ್ಚುವ ವಿಚಾರ ಸಂಬಂಧ ಉನ್ನತ ಶಿಕ್ಷಣ ಸಚಿವ ಹಾಗೂ ಮಾಜಿ ಸಚಿವರ ನಡುವೆ ವಿಧಾನಸಭೆಯಲ್ಲಿ ಜಟಾಪಟಿ

ವಿಶ್ವವಿದ್ಯಾಲಯಗಳ ಮುಚ್ಚುವ ವಿಚಾರ ಸಂಬಂಧ ಉನ್ನತ ಶಿಕ್ಷಣ ಸಚಿವ ಹಾಗೂ ಮಾಜಿ ಸಚಿವರ ನಡುವೆ ವಿಧಾನಸಭೆಯಲ್ಲಿ ಜಟಾಪಟಿ

ಬೆಂಗಳೂರು: ರಾಜ್ಯದ ನೂತನ ವಿಶ್ವವಿದ್ಯಾಲಯಗಳ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಸ್ಪಷ್ಟವಾದ ತೀರ್ಮಾನವಾಗಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜಗದೀಶ್ ಶಿವಯ್ಯ ಗುಡಗುಂಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಶ್ವವಿದ್ಯಾಲಯಗಳ ಸ್ಥಿತಿಗತಿ ಕುರಿತು ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ವಿಚಾರ ಸಂಪುಟ ಸಭೆಯ ಮುಂದೆ ಇನ್ನೂ ಬಂದಿಲ್ಲ. ವಾಹನ ಖರೀದಿ, ಜಮೀನು ಖರೀದಿ, ನೇಮಕಾತಿಯ ಸಮಸ್ಯೆಗಳಿವೆ. ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗುತ್ತದೆ ಎಂಬ ವಿಚಾರ ಮಾಧ್ಯಮಗಳಲ್ಲಿ ಬಂದಿದೆಯೇ ಹೊರತು, ಸರ್ಕಾರದಿಂದ ಯಾವುದೇ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ವಿನೂತನ ಮಾದರಿಯ 7 ನೂತನ ವಿಶ್ವವಿದ್ಯಾಲಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವು ಒಂದಾಗಿದೆ ಎಂದರು.

ಈ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಕಾರ್ಯನಿರ್ವಹಿಸಲಿವೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸುವ ಈ ವಿಶ್ವವಿದ್ಯಾಲಯಗಳಿಗೆ ವಾರ್ಷಿಕ 2 ಕೋಟಿ ರೂ.ಗಳ ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ ಎಂದು ಸಚಿವರು ಹೇಳಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳನ್ನು ಒಳಪಡುವಂತೆ ಜಮಖಂಡಿಯಲ್ಲಿ ಹೊಸದಾಗಿ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ. ರಾಣಿ ಚೆನ್ನಮ್ಮ ವಿವಿಯಿಂದ ಸ್ನಾತಕೋತ್ತರ ಕೇಂದ್ರಗಳು, ಬೋಧಕ, ಬೋಧಕೇತರ ಹುದ್ದೆಗಳು, ಸಂಯೋಜಿತ ಕಾಲೇಜುಗಳು, ಜಮೀನು, ಕಟ್ಟಡ, ಪೀಠೋಪಕರಣ ಸೇರಿದಂತೆ ಚರಾಸ್ತಿ, ಸ್ಥಿರಾಸ್ಥಿಗಳನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಸಿಬ್ಬಂದಿಯನ್ನು ಬಾಗಲಕೋಟೆ ವಿವಿಗೆ ವರ್ಗಾಯಿಸುವ ಪ್ರಕ್ರಿಯೆ ಪರಿಶೀಲನೆಯಲ್ಲಿದೆ ಎಂದು ಎಂ.ಸಿ.ಸುಧಾಕರ್ ತಿಳಿಸಿದರು.

ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಹಾಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಅಶ್ವತ್ಥನಾರಾಯಣ ಅವರ ಬೆಂಬಲಕ್ಕೆ ನಿಂತು ಬಿಜೆಪಿ ಶಾಸಕರು ಮಾತನಾಡಿದರೆ, ಸುಧಾಕರ್ ಅವರ ಬೆಂಬಲಕ್ಕೆ ನಿಂತು ಆಡಳಿತ ಪಕ್ಷದ ಶಾಸಕರು ಮಾತನಾಡಿದ್ದರಿಂದ ಸದನದಲ್ಲಿ ಗದ್ದಲ ಉಂಟಾಯಿತು.

ಈ ವೇಳೆ ಅಶ್ವತ್ಥನಾರಾಯಣ ಮಾತನಾಡಿ, 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿದ್ದು, ಸಚಿವರು ಹೇಳಿಕೆಯನ್ನೂ ಸಹ ನೀಡಿದ್ದಾರೆ. ಈಗ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಶಿಕ್ಷಣ ವಿರೋಧಿಗಳು ಎಂದು ಆರೋಪಿಸಿ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎದುರಾಗಿದೆ ಎಂದು ಕಿಡಿಕಾರಿದರು.

Category
ಕರಾವಳಿ ತರಂಗಿಣಿ