ಬೆಂಗಳೂರು : ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸಮಸ್ಯೆ ಇಲ್ಲ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶ್ಲಾಘಿಸಿದ್ದಾರೆ. ಪ್ರತಿಪಕ್ಷಗಳ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪಕ್ಕೆ ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ತಿರುಗೇಟು ನೀಡಿತು.
ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇಂದು ಸದನದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಹಾಗಾಗಿ ಈ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದರು.
ಪೊಲೀಸ್ ಇಲಾಖೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 26 ಸುಸಜ್ಜಿತ ಪೊಲೀಸ್ ಠಾಣೆಗಳು ಹಾಗೂ 2016 ವಸತಿ ಗೃಹಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
2024-25ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಡಿ 2491 ಕಿಮೀ ರಾಜ್ಯ ಹೆದ್ದಾರಿಗಳು ಮತ್ತು 3103 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ, ನವೀಕರಣ ಮತ್ತು 190 ಸೇತುವೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಎಚ್.ಎಸ್.ಡಿ.ಪಿ. ಹಂತ-5 ಅಡಿಯಲ್ಲಿ ಒಟ್ಟು 9000 ಕೋಟಿ ರೂ. ಮೊತ್ತದಲ್ಲಿ 2500 ಕಿಮೀ ಹೆದ್ದಾರಿಗಳ ಅಭಿವೃದ್ಧಿಯನ್ನು 2 ಘಟ್ಟಗಳಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜ್ಯವ್ಯಾಪಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ 4000 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸಿಐಆರ್‌ಎಫ್ ಯೋಜನೆಯಡಿ ರೂ.1385 ಕೋಟಿ ಮೊತ್ತದಲ್ಲಿ 2056 ಕಿ.ಮೀ. ರಾಜ್ಯದ 295 ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹೈಬ್ರಿಡ್ ವರ್ಷಾಶನ ಮಾದರಿ (HAM) ಯಲ್ಲಿ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್ನಿಂದ ಸಿಂಧನೂರಿನವರೆಗಿನ 78.45 ಕಿ.ಮೀ. ರಾಜ್ಯ ಹೆದ್ದಾರಿಯ ಅಭಿವೃದ್ಧಿ ರೂ.1696 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿದೆ ಎಂದರು.