image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶತಮಾನಗಳಿಂದ ಕತ್ತಲು ತುಂಬಿದ್ದ ಜಿಲ್ಲೆಯ ಹಾಡಿಗಳಿಗೆ ಬೆಳಕು ನೀಡುವ ಯೋಜನೆ ಸಾಕಾರ...

ಶತಮಾನಗಳಿಂದ ಕತ್ತಲು ತುಂಬಿದ್ದ ಜಿಲ್ಲೆಯ ಹಾಡಿಗಳಿಗೆ ಬೆಳಕು ನೀಡುವ ಯೋಜನೆ ಸಾಕಾರ...

ಚಾಮರಾಜನಗರ : ಶತಮಾನಗಳಿಂದ ಕತ್ತಲು ತುಂಬಿದ್ದ ಜಿಲ್ಲೆಯ ಹಾಡಿಗಳಿಗೆ ಬೆಳಕು ನೀಡುವ ಯೋಜನೆ ಸಾಕಾರಗೊಳ್ಳುತ್ತಿದೆ. ಮೊದಲಿಗೆ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಾಲಾರ್ ಹಾಡಿ ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ಬೆಳಕು ಕಂಡಿದೆ.

ಚಾಮರಾಜನಗರ ಜಿಲ್ಲೆಯ 31 ಹಾಡಿಗಳಿಗೆ ಶಾಶ್ವತ ವಿದ್ಯುತ್​​​​ ಸಂಪರ್ಕ ಕಲ್ಪಿಸುವ ಯೋಜನೆಗೆ ಕಳೆದ ನವೆಂಬರ್​​ 30ರಂದು ಚಾಲನೆ ನೀಡಲಾಗಿತ್ತು. ಮೂರು ತಿಂಗಳಿನಲ್ಲಿಯೇ ಯೋಜನೆಯ ಮೊದಲ ಹಂತದಲ್ಲಿ ಪಾಲಾರ್​ ಹಾಡಿಗೆ ವಿದ್ಯುತ್​ ಸಂಪರ್ಕ ಕಲ್ಪಿಸುವ ಮೂಲಕ ಅತ್ಯಂತ ಕ್ಷಿಪ್ರಗತಿಯಲ್ಲಿ ಯೋಜನೆ ತಲುಪಿದೆ.

ಒಟ್ಟು 31 ಹಾಡಿಗಳಿಗೆ 42 ಕೋಟಿ ರೂ. ವೆಚ್ಚದಲ್ಲಿ 2 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್​​ ಸಂಪರ್ಕ ಕಲ್ಪಿಸುವ ಐತಿಹಾಸಿಕ ಯೋಜನೆ ಚಾಮರಾಜನಗರ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಇದಕ್ಕೆ ಸಾಕ್ಷಿಯಾಗಿ ಪಾಲಾರ್​​ ಹಾಡಿ ವಿದ್ಯುತ್​ ಸೌಲಭ್ಯವನ್ನು ಪಡೆದುಕೊಂಡಿದೆ. ಪಾಲಾರ್​​ ಹಾಡಿಯಲ್ಲಿ ವಿದ್ಯುತ್​​​ ಸಂಪರ್ಕ ಕಲ್ಪಿಸುವ ಮಹತ್ತರ ಸೇವೆಗೆ ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಇಂದು ಚಾಲನೆ ನೀಡುವ ಮೂಲಕ ಯೋಜನೆಯ ಮೊದಲ ಹಂತ ಸಾಕಾರಗೊಂಡಿತು.

"ಜಿಲ್ಲೆಯ ಎಲ್ಲಾ 31 ಹಾಡಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲಿದ್ದೇವೆ. ಕಾಮಗಾರಿ ನಡೆಯುತ್ತಿದ್ದು, 2 ರಿಂದ 3 ತಿಂಗಳಲ್ಲಿ ಸಂಪೂರ್ಣವಾಗಿ ಎಲ್ಲಾ ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಪೂರ್ಣವಾಗಲಿದೆ. ಯೋಜನೆ ಫಲಪ್ರದ ಜಾರಿಗೆ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಅಧಿಕಾರಿಗಳು ಕಾರಣರಾಗಿದ್ದಾರೆ" ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಜತೆಗೆ, "12 ಕೋಟಿ ರೂ. ವೆಚ್ಚದಲ್ಲಿ ಹಾಡಿಗಳಲ್ಲಿ 123 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಕಾರ್ಯವು ಶೀಘ್ರದಲ್ಲಿಯೇ ಆಗಲಿದೆ. ಹಾಡಿ, ಪೋಡುಗಳ ಅರಣ್ಯವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಶಾಶ್ವತ ವಿದ್ಯುತ್​ ಒದಗಿಸುವ ಕಾರ್ಯ ನೆರವೇರಿರುವುದರಿಂದ ನಾವು ಮಾಡಿದ ಕೆಲಸ ಸಾರ್ಥಕ ಎನಿಸಿದೆ. ಜನರ ಅಗತ್ಯಗಳಿಗೆ ಎಲ್ಲಾ ರೀತಿಯ ಸ್ಪಂದನೆ ಸಿಗಲಿದೆ" ಎಂದು ಕೆ. ವೆಂಕಟೇಶ್​ ಹೇಳಿದರು.

Category
ಕರಾವಳಿ ತರಂಗಿಣಿ