ಬೆಂಗಳೂರು: ರಾಜ್ಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲನ್ನು ಇನ್ನಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಕರ್ನಾಟಕ ವಿರೋಧಿ ಮಾತ್ರವಲ್ಲ, ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾರುವ ಸಂವಿಧಾನಕ್ಕೆ ಕೂಡಾ ವಿರುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದ ತೆರಿಗೆ ಪಾಲನ್ನು ಶೇಕಡಾ 41 ರಿಂದ 40 ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ಗಮನಿಸುತ್ತಾ ಬಂದರೆ ನಿರಂತರವಾಗಿ ರಾಜ್ಯಗಳ ಸಂವಿಧಾನಬದ್ಧ ಅಧಿಕಾರಗಳನ್ನು ಮೊಟಕುಗೊಳಿಸುತ್ತಾ ಅವುಗಳನ್ನು ದುರ್ಬಲಗೊಳಿಸುತ್ತಾ ಬಂದಿರುವುದನ್ನು ಕಾಣಬಹುದು ಎಂದು ತಿಳಿಸಿದ್ದಾರೆ.
ರಾಜ್ಯಗಳು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುವ ತೆರಿಗೆಯಲ್ಲಿ ನ್ಯಾಯಬದ್ಧ ಪಾಲು ರಾಜ್ಯಗಳಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಹಣಕಾಸು ಆಯೋಗ, ರಾಜ್ಯಗಳ ಹಕ್ಕುಗಳನ್ನು ದಮನಿಸಲು ಹೊರಟ ಕೇಂದ್ರ ಸರ್ಕಾರದ ಕೈಗಳ ಆಯುಧವಾಗಿರುವುದು ದುರಂತವೇ ಸರಿ. ರಾಜ್ಯಗಳು ಕೇಂದ್ರ ಸರ್ಕಾರದ ಮರ್ಜಿ ಕಾಯುವಂತಹ ಪರವಾಲಂಬಿ ಸ್ಥಿತಿಗೆ ನೂಕುವುದು ಈ ಹುನ್ನಾರದ ದುರುದ್ದೇಶವಾಗಿರುವಂತೆ ಕಾಣುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಧಿಕಾರದ ವಿಕೇಂದ್ರೀಕರಣ ಪ್ರಜಾಪ್ರಭುತ್ವ, ಅಧಿಕಾರದ ಕೇಂದ್ರಿಕರಣ ಸರ್ವಾಧಿಕಾರ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಎಂಟು ದಶಕಗಳು ಪೂರ್ಣಗೊಳ್ಳುತ್ತಿರುವ ಇಂದಿನ ಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ವಿಕಾಸಗೊಳಿಸಿ ಅಧಿಕಾರದ ವಿಕೇಂದ್ರಿಕರಣ ಮಾಡಬೇಕಾದ ಕಾಲದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿರುವುದು ವಿಷಾದನೀಯ. ಪ್ರತಿ ವರ್ಷ ಕನ್ನಡಿಗರಿಂದ ಸಂಗ್ರಹಿಸಲಾದ ಅಂದಾಜು ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ. ಅದರಲ್ಲಿ ರಾಜ್ಯಕ್ಕೆ ವಾಪಸ್ ಬರುವುದು ರೂಪಾಯಿಗೆ 15 ಪೈಸೆ ಮಾತ್ರ. ಹದಿನೈದನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇಕಡಾ 3.64 ಕ್ಕೆ ಇಳಿಸಿದ್ದ ಕಾರಣದಿಂದಾಗಿ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ 68,775 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ ಎಂದು ವಿವರಿಸಿದ್ದಾರೆ.
15ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದರೂ ಇಲ್ಲಿಯವರೆಗೆ ಆಯೋಗವೇ ಶಿಫಾರಸು ಮಾಡಿರುವ ವಿಶೇಷ ಅನುದಾನ ರೂ. 5495 ಕೋಟಿ ಮತ್ತು ರಾಜ್ಯ ಕೇಂದ್ರಿತ ರೂ. 6000 ಕೋಟಿ ಮೊತ್ತದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ ಎಂದಿದ್ದಾರೆ.