image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಾನು ಇಂದು ದುಡ್ಡು ತಂದಿಲ್ಲ. ನಾಳೆ ದುಡ್ಡು ತಂದು ಪುಸ್ತಕ ತೆಗೆದುಕೊಳ್ಳುತ್ತೇನೆ - ಸಿಎಂ ಸಿದ್ದರಾಮಯ್ಯ

ನಾನು ಇಂದು ದುಡ್ಡು ತಂದಿಲ್ಲ. ನಾಳೆ ದುಡ್ಡು ತಂದು ಪುಸ್ತಕ ತೆಗೆದುಕೊಳ್ಳುತ್ತೇನೆ - ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇದೇ ಮೊದಲ ಬಾರಿಗೆ ಶಕ್ತಿಸೌಧ ವಿಧಾನಸೌಧದ ಆವರಣದಲ್ಲಿ ಸಚಿವಾಲಯದ ವತಿಯಿಂದ ಪುಸ್ತಕ ಜಾತ್ರೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪುಸ್ತಕ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, "ಅತ್ಯಂತ ಸಂತೋಷದಿಂದ‌ ಉದ್ಘಾಟನೆ ಮಾಡಿದ್ದೇನೆ. 151 ಪುಸ್ತಕ ಮಳಿಗೆಗಳು ಇವೆ. ಪುಸ್ತಕಪ್ರಿಯರಿಗೆ ಇದೊಂದು ಹಬ್ಬ. ಬೇರೆ ಭಾಷೆಯಿಂದ ಭಾಷಾಂತರ ಆಗಿರುವ ಪುಸ್ತಕಗಳು ಸಹ ಇಲ್ಲಿ ಸಿಗುತ್ತವೆ. ದೇಶ ಸುತ್ತು, ಕೋಶ ಓದು ಅಂತ ಗಾದೆ ಇದೆ. ಜ್ಞಾನ ವಿಕಾಸ ಮಾಡಬೇಕು. ಓದುವಿಕೆಯಿಂದ ಜ್ಞಾನ ವಿಕಾಸ ಆಗುತ್ತದೆ. ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು" ಎಂದು ಹೇಳಿದರು.

"ನಾನು ಇಂದು ದುಡ್ಡು ತಂದಿಲ್ಲ. ನಾಳೆ ದುಡ್ಡು ತಂದು ಪುಸ್ತಕ ತೆಗೆದುಕೊಳ್ಳುತ್ತೇನೆ" ಎಂದು ನಗೆ ಚಟಾಕಿ ಹಾರಿಸಿದರು. "ನನಗೆ ಬೇಕಾದ ಪುಸ್ತಕ ಖರೀದಿ ಮಾಡುತ್ತೇನೆ. ಬೇರೆಯವರು ಖರೀದಿ ಮಾಡಿರೋ ಪುಸ್ತಕ ಓದಬಾರದು. ನೀವೇ ಖರೀದಿ ಮಾಡಿ ಪುಸ್ತಕ ಓದಬೇಕು" ಎಂದು ಸಲಹೆ ನೀಡಿದರು.

ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, "ಪುಸ್ತಕ ಮೇಳ ಹಮ್ಮಿಕೊಳ್ಳುವ ಕನಸು ಕಂಡಿದ್ದೆವು. ಸಭಾಪತಿಗಳು ಎಲ್ಲಾ ಸಹಕಾರ ಕೊಟ್ಟಿದ್ದಾರೆ. ವಿಧಾನಸೌಧ ರಾಜಕಾರಣಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ವಿಧಾನಸೌಧ ಎನ್ನುವ ಭಾವನೆ ಬರಲು ಅವಕಾಶ ಮಾಡಿಕೊಟ್ಟಿದ್ದೇವೆ. ಸಾಹಿತಿಗಳಿಗೆ ನಾವು ವಿಶೇಷ ಗೌರವ ಕೊಡ್ತಿದ್ದೇವೆ. ಸಾಹಿತಿಗಳು ಸತ್ಯವನ್ನು ಹೇಳುವವರು. ಸಾಹಿತಿಗಳಿಗೆ, ಬರಹಗಾರರಿಗೆ ನಾವು ಅವಕಾಶ ಮಾಡಿಕೊಟ್ಟಿದ್ದೇವೆ" ಎಂದು ಹೇಳಿದರು.

"ವಿಧಾನಸೌಧದ ಆವರಣದಲ್ಲಿ 151 ಮಳಿಗೆ ತೆರೆಯಲು ಮಾತ್ರ ಅವಕಾಶವಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಪ್ರಸಕ್ತ ಸಾಲಿನ ಅನುದಾನದಲ್ಲಿ 2 ಲಕ್ಷ ರೂ. ಗಳ ಮಿತಿಯೊಳಗೆ ಶಾಸಕರು ಪುಸ್ತಕ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಶಾಸಕರು ಪುಸ್ತಕಗಳನ್ನು ಖರೀದಿಸಿ ಆಯಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ" ಎಂದರು.

ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಗೋವಾ ರಾಜ್ಯದ ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ದಾಮೋದರ್ ಮೌಜೋ ಸೇರಿದಂತೆ ಇತರೆ ಹಿರಿಯ ಸಾಹಿತಿಗಳನ್ನು ಸನ್ಮಾನಿಸಲಾಯಿತು.

Category
ಕರಾವಳಿ ತರಂಗಿಣಿ