ಕಾರವಾರ: ಉತ್ತರಕನ್ನಡದಲ್ಲಿ ಬಿಸಿಲ ಜಳಕ್ಕೆ ಜನ ಕಂಗಾಲಾಗಿದ್ದು, ರಾಜ್ಯದಲ್ಲಿಯೇ ಗರಿಷ್ಠ 41.3 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾರವಾರದ ಸಾವಂತವಾಡದಲ್ಲಿ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಫೆಬ್ರವರಿ 25 ರ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಹಾಗೂ ರಾಯಚೂರು ಜಿಲ್ಲೆಗಳ ಒಟ್ಟು 13 ಸ್ಥಳಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಈ ಪೈಕಿ ಉತ್ತರಕನ್ನಡದ ಕರಾವಳಿಯಲ್ಲಿಯೇ 6 ಸ್ಥಳಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದ್ದು, ಜಿಲ್ಲೆಯ ಜನ ಕಂಗಾಲಾಗಿದ್ದಾರೆ.
ಕಾರವಾರದ ಸಾವಂತವಾಡದಲ್ಲಿ ಗರಿಷ್ಠ 41.3 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 40.7, ಕುಮಟಾದ ಮಿರ್ಜಾನ್‌ನಲ್ಲಿ 40.4, ಕಾರವಾರದ ಘಾಡಸಾಯಿದಲ್ಲಿ 40.0, ಅಂಕೋಲಾದ ಬಸಗೋಡುದಲ್ಲಿ 39.8,ಹೊನ್ನಾವರದ ಮಾಹಿನ ಕುರ್ವೆಯಲ್ಲಿ 39.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನು ದಕ್ಷಿಣಕನ್ನಡದ ಸುಳ್ಯದ ಸುಳ್ಯ1ರಲ್ಲಿ 40.6, ಪುತ್ತೂರು ಉಪ್ಪಿನಂಗಡಿಯಲ್ಲಿ 40.4, ಬಂಟ್ಯಾಳದ ಪಾಣೆ ಮಂಗಳೂರಿನಲ್ಲಿ ಹಾಗೂ ಪತ್ತೂರು 1ರಲ್ಲಿ 39.7 ಡಿ.ಸೆ ದಾಖಲಾಗಿದೆ. ರಾಯಚೂರಿನ ಗುರ್ಗುಂಟಾದಲ್ಲಿ 39.3, ಉಡುಪಿಯ ಕಾರ್ಕಳದ ಅಜೆಕಾರ್‌ನಲ್ಲಿ 40.3, ಕುಂದಾಡಪುರದ ವಂಡ್ಸೆಯಲ್ಲಿ 40.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ.
ಇನ್ನು ಮುಂದಿನ ಐದು ದಿನಗಳವರೆಗೂ ಈ ಗರಿಷ್ಠ ತಾಪಮಾನ ಮುಂದುವರಿಯಲಿದ್ದು, ಉತ್ತರಕನ್ನಡ, ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ 3 ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಇರುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಎಚ್ಚರಿಕೆ ನೀಡಿದೆ.