ಶಿವಮೊಗ್ಗ: ಐಪೋನ್ನ ಡಿಸ್‌ಪ್ಲೇ ರಿಪ್ಲೇಸ್ ಮಾಡಿಕೊಡದೇ ಸೇವಾನ್ಯೂನತೆ ಕುರಿತು ದಾಖಲಿಸಿದ್ದ ದೂರು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡಲು ಆದೇಶಿಸಿತು.
ಅರ್ಜಿದಾರರಾದ ಶಿವಮೊಗ್ಗದ ಅರವಿಂದ ನಗರ ನಿವಾಸಿ ಪುನೀತ್.ಡಿ. ಅವರು ವಕೀಲರ ಮೂಲಕ 1ನೇ ಎದುರುದಾರ ಮಾಲೀಕರು/ವ್ಯವಸ್ಥಾಪಕರು, ಐ ಕಾರ್ನರ್-ಕಾರ್ತಿಕ್ ಟೆಕ್ ವರ್ಲ್ಡ್ ಶಾಪ್ ಶಿವಮೊಗ್ಗ, 2ನೇ ಎದುರುದಾರ ಕಸ್ಟಮರ್ ಕಂಪ್ಲೇಂಟ್ ಮ್ಯಾನೇಜರ್ ಆ್ಯಂಡ್ ಇನ್ಫೋರ್ಟರ್, ಯುಬಿಸಿಟಿ ಬೆಂಗಳೂರು ಮತ್ತು ಸರ್ವೀಸ್ ಮ್ಯಾನೇಜರ್, ಆ್ಯಪಲ್ ಟಕ್ನೋಲಜಿಸ್ ಪ್ರೆ.ಲಿ(ಐ-ಕೇರ್) ಮಲ್ಲೇಶ್ವರಂ ಬೆಂಗಳೂರು ಇವರ ವಿರುದ್ಧ ದೂರು ಸಲ್ಲಿಸಿದ್ದರು.
ದೂರುದಾರ ಪುನೀತ್, ಶಿವಮೊಗ್ಗದ ಐ ಕಾರ್ನರ್ ಮೊಬೈಲ್ ಸೆಂಟರ್ನಿಂದ 2021ರ ಸೆಪ್ಟೆಂಬರ್ನಲ್ಲಿ ಐಫೋನ್ 13 ಅನ್ನು 79,900 ರೂ ಪಾವತಿಸಿ ಖರೀದಿಸಿದ್ದರು. ಕಳೆದ 2-3 ತಿಂಗಳುಗಳ ಹಿಂದೆ ಮೊಬೈಲ್‌ನ ಡಿಸ್‌ಪ್ಲೇನಲ್ಲಿ ಬಣ್ಣ ಬಣ್ಣದ ಗೆರೆಗಳು ಕಾಣಿಸಿಕೊಂಡಿವೆ. ಇದರ ಬಗ್ಗೆ 1ನೇ ಎದುರುದಾರರ ಬಳಿ ತಿಳಿಸಿದರೆ ಫೋನಿನ ಐಒಎಸ್ ಸಾಫ್ಟ್ವೇರ್ ಅಪ್ಡೇಟ್ನಿಂದಾಗಿ ಡಿಸ್‌ಪ್ಲೇ ಹಾಳಾಗಿದೆ. ಇದಕ್ಕೆ 3ನೇ ಎದುರುದಾರರಾದ ಸರ್ವಿಸ್ ಸೆಂಟರ್ ಅನ್ನು ಭೇಟಿ ಮಾಡಲು ತಿಳಿಸಿದ್ದರು.
3ನೇ ಎದುರುದಾರರು, ಡಿಸ್‌ಪ್ಲೇ ಹಾಳಾಗಿದ್ದು ಸರಿಪಡಿಸಲು 26,492 ರೂ.ಗಳಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ಕಂಪನಿಯ ಐಒಎಸ್ ಸಾಫ್ಟ್ವೇರ್ ಅಪ್‌ಡೇಟ್ ಮಾಡಿದಾಗ ಡಿಸ್‌ಪ್ಲೇ ಹಾಳಾಗಿರುವುದರಿಂದ ನಿಮ್ಮ ಖರ್ಚಿನಲ್ಲಿ ಸರಿಪಡಿಸಿ ಎಂದಿದ್ದಾರೆ. ಹೀಗಾಗಿ, ವಿನಾಕಾರಣ ಇಲ್ಲಸಲ್ಲದ ಕಾರಣಗಳನ್ನು ಹೇಳಿ ದೂರುದಾರರನ್ನು ಅಲೆಯುವಂತೆ ಮಾಡಿದ್ದಾರೆ.
ನಂತರ ದೂರುದಾರರು ವಕೀಲರ ಮೂಲಕ 1ರಿಂದ 3ನೇ ಎದುರುದಾರರಿಗೆ ನೋಟಿಸ್ ಜಾರಿಗೊಳಿಸಿ, ಯಾವುದೇ ಪ್ರತ್ಯುತ್ತರ ನೀಡಿಲ್ಲ. ಡಿಸ್‌ಪ್ಲೇ ಸರಿಮಾಡಿಕೊಡದೇ ಸೇವಾನ್ಯೂನತೆ ಎಸಗಿದ್ದಾರೆ ಎಂದು ಆಯೋಗದ ಮುಂದೆ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ, ದಾಖಲೆಗಳು ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ಆಯೋಗ, ಎದುರುದಾರರು ಸೇವಾನ್ಯೂನತೆ ಎಸಗಿದ್ದಾರೆಂದು ತೀರ್ಮಾನಿಸಿದೆ. ಹೀಗಾಗಿ, "1ರಿಂದ 3ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಂದ ಯಾವುದೇ ರೀತಿಯ ಹಣವನ್ನು ಸ್ವೀಕರಿಸದೇ ಆದೇಶವಾದ 45 ದಿನಗಳೊಳಗಾಗಿ ಹೊಸ ಡಿಸ್‌ಪ್ಲೇ ಅಳವಡಿಸಿಕೊಡಬೇಕು. ಇತರೆ ಸೂಕ್ತ ರಿಪೇರಿ ಮಾಡಿ ಸರಿಪಡಿಸಿಕೊಡಬೇಕು. ತಪ್ಪಿದಲ್ಲಿ ಎದುರದಾರರ ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿ ಮೊಬೈಲ್ ಮೊತ್ತ 79,900 ರೂ.ಗಳನ್ನು ಪಾವತಿಸಬೇಕು. ಮಾನಸಿಕ ಹಾನಿಗೆ 5000 ರೂ ಪರಿಹಾರ ಹಾಗೂ 5000 ರೂ ವ್ಯಾಜ್ಯ ಖರ್ಚು ವೆಚ್ಚವಾಗಿ ಪಾವತಿಸಬೇಕು. ತಪ್ಪಿದಲ್ಲಿ ಈ ಮೊತ್ತಗಳನ್ನು ಪೂರ್ತಿ ಸಂದಾಯ ಮಾಡುವವರೆಗೆ ಶೇ.10 ಬಡ್ಡಿಸಹಿತ ಪಾವತಿಸಬೇಕು" ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ. ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಆದೇಶಿಸಿದೆ.