ಬೆಂಗಳೂರು: ನಕಲಿ ವೇತನ ಪ್ರಮಾಣಪತ್ರಗಳನ್ನು ಸಲ್ಲಿಸಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ 7.17 ಕೋಟಿ ರೂ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಇಂದು ಹೈಕೋರ್ಟ್ ಅಮಾನತ್ತಿನಲ್ಲಿರಿಸಿದೆ.
ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ಪರಿಗಣಿಸಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2025ರ ಫೆ.6ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರಿಗೆ ವಿಶೇಷ ನ್ಯಾಯಾಲಯ ಆರೋಪಿಗೆ (ಮೇಲ್ಮನವಿದಾರರಿಗೆ) ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಹೊರಡಿಸಿರುವ ಆದೇಶ ಅಮಾನತ್ತಿನಲ್ಲಿರಿಸಿತು. ಜೊತೆಗೆ, ದಂಡದ ಮೊತ್ತವನ್ನು ಪ್ರಕರಣದ ಸಂತ್ರಸ್ತರಿಗೆ ಪರಿಹಾರವಾಗಿ ವಿತರಿಸಲು ಆರೋಪಿಗೆ ನಿರ್ದೇಶಿಸಿದ್ದ ವಿಶೇಷ ನ್ಯಾಯಾಲಯದ ತೀರ್ಪಿಗೂ ತಡೆಯಾಜ್ಞೆ ನೀಡಿತು. ಅಲ್ಲದೆ, ವಿಶೇಷ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತದಲ್ಲಿ 5.25 ಲಕ್ಷ ರೂ.ಗಳನ್ನು ಠೇವಣಿ ಇಡಬೇಕು ಎಂದು ಆದೇಶಿಸಿದೆ.
ವಿಚಾರಣೆ ವೇಳೆ ಕೃಷ್ಣಯ್ಯ ಶೆಟ್ಟಿ ಪರ ಹಿರಿಯ ವಕೀಲರು, ''ಮೇಲ್ಮನವಿದಾರರಿಗೆ ವಿಶೇಷ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣವು ವಂಚನೆ ಆರೋಪಕ್ಕೆ ಸಂಬಂಧಿಸಿದೆ. ಮೇಲ್ಮನವಿ ಕುರಿತು ನ್ಯಾಯಾಲಯವು ದೀರ್ಘವಾಗಿ ವಾದ ಆಲಿಸಬೇಕು. ಶಿಕ್ಷೆ ಪ್ರಮಾಣ ಮೂರು ವರ್ಷವಾಗಿದೆ. ಈಗಾಗಲೇ ಶಿಕ್ಷೆಯನ್ನು ವಿಶೇಷ ನ್ಯಾಯಾಲಯವೇ ಅಮಾನತ್ತಿನಲ್ಲಿರಿಸಿದೆ. ಆ ಆದೇಶವನ್ನು ಮುಂದುವರೆಸಬೇಕು'' ಎಂದು ಪೀಠಕ್ಕೆ ಮನವಿ ಮಾಡಿದರು.