ಹಾಸನ: ಸಾಹೇಬ್ರು ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಾರೆ, 16 ಗಂಟೆ ಕೆಲಸ ಮಾಡ್ತಾರೆ ಅಂತಾರೆ, ಆದರೆ ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ, ಹಾಗಾಗಿ ಬಿಜೆಪಿಯವರಿಗೆ ಕೈ ಮುಗಿದು ಕೇಳುವೆ, ದೇಶದ ಮಹಾರಾಜ ಎನಿಸಿಕೊಳ್ಳುವ ಪ್ರಧಾನಿ ಮೋದಿ ಅವರನ್ನು ಬದಲು ಮಾಡಿ, ಇದೇ ದೇಶಕ್ಕೆ ಸಿಗುವ ಪರಿಹಾರ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮೋದಿ ಬಗ್ಗೆ ಲೇವಡಿ ಮಾಡಿದರು.
ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶ ಯಾವ ಪಕ್ಷದ ಸ್ವತ್ತಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ಗೆ ಈ ದೇಶವನ್ನು ಒಪ್ಪಿಸಲು ಸಾಧ್ಯವಿಲ್ಲ. ಬಿಜೆಪಿಯವರಿಗೆ ಕೈ ಮುಗಿದು ಕೇಳುತ್ತೇನೆ. ಮೊದಲು ನಿಮ್ಮ ಮಹಾರಾಜನಾಗಿರುವ ದೇಶದ ಪ್ರಧಾನಿಯನ್ನು ಬದಲಾಯಿಸಿ. ಇದರಿಂದ ದೇಶದಕ್ಕೆ ಪರಿಹಾರ ಸಿಗುತ್ತದೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಮೆರಿಕದಿಂದ ಕಾಲಿಗೆ ಚೈನ್ ಹಾಕಿಕೊಂಡು ದೇಶದ ಜನರನ್ನು ತಂದು ಬಿಸಾಕಿದ್ದು ಇಡೀ ದೇಶಕ್ಕೆ ಅವಮಾನ ಮಾಡಿದರು. ಭಾರತದಲ್ಲಿ 18 ಲಕ್ಷ ಜನ ಪಾಸ್ಪೋರ್ಟ್ ಸರೆಂಡರ್ ಮಾಡಿದ್ದಾರೆ. ಆದರೆ, ಇದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ. ಕಳೆದ 11 ವರ್ಷದಿಂದ ಏನನ್ನೂ ಮಾಡಿಲ್ಲ. ಲೆಕ್ಕ ಇಲ್ಲ, ಬುಕ್ ಇಲ್ಲ. ಸಾಹೇಬ್ರು ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಾರೆ. 16 ಗಂಟೆ ಕೆಲಸ ಮಾಡ್ತಾರೆ ಅಂತಾರೆ. ಆದರೆ, ಅವರ ಕಣ್ಣುಗಳು ಹೊಳೆಯುತ್ತಿವೆ. ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ ಎಂದು ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕತೆ ಕುಸಿದಿರುವ ಬಗ್ಗೆ ಮಾತನಾಡಿದ ಲಾಡ್ , ಪ್ರಧಾನಮಂತ್ರಿ ಮೋದಿಯವರ ಜೀವನಶೈಲಿ ಕುರಿತು ಕಿಡಿಕಾರಿದರು.
ಪ್ರಧಾನಿ ಸ್ಥಾನಕ್ಕೆ ಬದಲಾವಣೆ ಅಗತ್ಯವಿದೆ. ಭಾರತವನ್ನು ಉಳಿಸಬೇಕಾದರೆ, ಮೋದಿ ಅವರ ಜಾಗದಲ್ಲಿ ಕಾರ್ಯಕ್ಷಮತೆಯುಳ್ಳ ಮತ್ತೊಬ್ಬ ವ್ಯಕ್ತಿಯನ್ನು ನೇಮಕ ಮಾಡಬೇಕು. ನಿತಿನ್ ಗಡ್ಕರಿ ಅಥವಾ ಬೇರೆ ಯಾರೇ ಆದರೂ ಬರಲಿ, ಯುವಕರ ಭವಿಷ್ಯ ಉಳಿಯಲಿದೆ. ಮೋದಿ ಇಲ್ಲದೆ ಬಿಜೆಪಿಗೆ ಯಾರೂ ಇಲ್ಲವೆ ? ಎಂದು ಸಚಿವ ಸಂತೋಷ್ ಲಾಡ್ ಕೇಂದ್ರ ಬಿಜೆಪಿಗೆ ಪ್ರಶ್ನಿಸಿದರು.