ಹಾವೇರಿ: ''ರಾಜ್ಯದ ಸಮಸ್ಯೆಗಳು ನಿವಾರಣೆ ಆಗಬೇಕಾದರೆ ಕೇಂದ್ರ ಸರ್ಕಾರದ ಜೊತೆ ಸುಮಧುರ ಬಾಂಧವ್ಯ ಹೊಂದಬೇಕು'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರಲ್ಲಿ ನಡೆದ ಕರ್ನಾಟಕ ವೈಭವ ಕಾರ್ಯಕ್ರಮದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ರಾಜ್ಯದಲ್ಲಿ ನಿತ್ಯ ಸಂಘರ್ಷದ ಪದ ಬಳಕೆ ಮಾಡುತ್ತಿದ್ದಾರೆ. ಅದರಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಹಿಂದಿನ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆ ಯಾವ ರೀತಿ ನಡೆದುಕೊಂಡಿವೆ ಎನ್ನುವ ಕಟ್ಟುಪಾಡುಗಳಿವೆ, ಅದೇ ರೀತಿ ನಡೆದುಕೊಳ್ಳಬೇಕಾಗುತ್ತದೆ'' ಎಂದರು.
''ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಮಾರ್ಗಸೂಚಿಗಳಿವೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆದುಕೊಳ್ಳುತ್ತಿದೆಯೇ ಹೊರತು, ಅದು ಹೊಸದಾಗಿ ರಾಜ್ಯದ ಜೊತೆ ಈ ರೀತಿ ನಡೆದುಕೊಳ್ಳುತ್ತಿಲ್ಲ. ಮಾರ್ಗಸೂಚಿ ಅರಿಯದೇ ಪ್ರಧಾನಿ ಮೋದಿ ಕಡೆ ಬೊಟ್ಟು ಮಾಡಿದರೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ'' ಎಂದು ಕುಮಾರಸ್ವಾಮಿ ತಿಳಿಸಿದರು.
''ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ಅನ್ಯಾಯವಾಗುತ್ತಿದೆ ಎಂದರೆ ಹೇಗೆ. ನಿಜವಾದ ಸಮಸ್ಯೆ ಎಲ್ಲಿ ಆಗುತ್ತಿದೆಯೆಂಬುದನ್ನು ಅರಿತು ನಡೆದುಕೊಳ್ಳಬೇಕು. ಕರ್ನಾಟಕದ ಯಾವ ರೀತಿಯ ಅಭಿವೃದ್ಧಿ ಕಾಣಬೇಕಾಗಿತ್ತೋ ಅದನ್ನು ಕಾಣದ ಪರಸ್ಥಿತಿ ಇದೆ. ಸಂವಿಧಾನವನ್ನು ಸಂಪೂರ್ಣ ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ಒಂದು ಪಕ್ಷದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಕೇವಲ ರಾಜಕೀಯ, ವೈಯಕ್ತಿಕ ಪಲಾಫೇಕ್ಷೆಗೆ ಈ ರೀತಿಯ ಅಪಪ್ರಚಾರ ನಡೆಸಲಾಗುತ್ತದೆ'' ಎಂದು ಕಿಡಿಕಾರಿದರು.
''ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಈ ಹಿಂದೆಯೇ ರುಜುವಾತಾಗಿದೆ. ಆದರೂ ಅಪಪ್ರಚಾರಗಳು ನಡೆಯುತ್ತಿವೆ. ವೈಯಕ್ತಿಕ ಸ್ವಾರ್ಥ ಸಾಧನಗೆ ಸಮಾಜದ ದಾರಿ ತಪ್ಪಿಸುವ ಒಂದು ವರ್ಗವಿದೆ. ಆ ವರ್ಗವನ್ನು ಎಚ್ಚರಿಸುವ ಅನಿವಾರ್ಯತೆ ಇದೆ'' ಎಂದು ಕುಮಾರಸ್ವಾಮಿ ಹೇಳಿದರು.