image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ಸಜ್ಜು

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ಸಜ್ಜು

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏಷ್ಯಾದ ಅಗ್ರಗಣ್ಯ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಕ್ಕೆ ವೇದಿಕೆ ಸಿದ್ಧವಾಗಿದೆ. ದ್ವೈವಾರ್ಷಿಕವಾಗಿ ನಡೆಯುವ 15 ನೇ ಆವೃತ್ತಿಯ ಏರೋ ಇಂಡಿಯಾ ಶೋನಲ್ಲಿ ಇತ್ತೀಚಿನ ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನವು ಅನಾವರಣಗೊಳ್ಳಲಿದೆ.

ಕಾಂಬ್ಯಾಟ್ ಏರ್ ಟೀಮಿಂಗ್ ಸಿಸ್ಟಮ್ (ಸಿಎಟಿಎಸ್ ಅಥವಾ ಕ್ಯಾಟ್ಸ್) ವಾರಿಯರ್ ಇದು ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಇದು ಪೂರ್ಣ ಪ್ರಮಾಣದ ಎಂಜಿನಿಯರಿಂಗ್ ವ್ಯವಸ್ಥೆಯಾಗಿದ್ದು, ಇಂಡಿಯಾ ಪೆವಿಲಿಯನ್​ನಲ್ಲಿ ಪ್ರದರ್ಶಿತವಾಗಲಿದೆ. ಕ್ಯಾಟ್ಸ್ ವಾರಿಯರ್ ಅತ್ಯಾಧುನಿಕ ವ್ಯವಸ್ಥೆಯಾಗಿದ್ದು, ಇದನ್ನು ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

ಏರೋ ಇಂಡಿಯಾ 2025 ರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ದೇಶೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಇಂಡಿಯಾ ಪೆವಿಲಿಯನ್​ನಲ್ಲಿ ಪ್ರದರ್ಶಿಸಲಿದೆ ಎಂದು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿರುವ ಎಚ್​ಎಎಲ್ ತಿಳಿಸಿದೆ. ಯಲಹಂಕ ವಾಯುನೆಲೆಯಲ್ಲಿ ಫೆ.10ರಿಂದ ಆರಂಭವಾಗಲಿರುವ ಐದು ದಿನಗಳ ಈ ಕಾರ್ಯಕ್ರಮದಲ್ಲಿ ಎಚ್ ಎಎಲ್ ನ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್ ಯುಎಚ್) ಮತ್ತು ಕ್ಯಾಟ್ಸ್ ವಾರಿಯರ್ ಪ್ರಮುಖ ಆಕರ್ಷಣೆಗಳಾಗಿವೆ.

ವಿಶ್ವದಾದ್ಯಂತದ ವಿವಿಧ ದೇಶಗಳ ರಕ್ಷಣಾ ಸಚಿವರು, ಗಣ್ಯರು ಮತ್ತು ಉದ್ಯಮದ ಮುಖಂಡರು ಸೇರಿದಂತೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಏರೋ ಇಂಡಿಯಾಗೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮವು ಎಚ್ಎಎಲ್​ಗೆ ತನ್ನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ಜೊತೆಗೆ ಜಾಗತಿಕ ಏರೋಸ್ಪೇಸ್ ಕಂಪನಿಗಳೊಂದಿಗೆ ಸಹಯೋಗ ಮತ್ತು ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸುತ್ತದೆ.

ರಕ್ಷಣಾ ಸಚಿವಾಲಯವು ಎಚ್ಎಎಲ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮತ್ತು ಬಾಹ್ಯಾಕಾಶ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸುತ್ತಿರುವ ಏರೋ ಇಂಡಿಯಾ 1996 ರಲ್ಲಿ ಪ್ರಾರಂಭವಾದಾಗಿನಿಂದ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. ಪ್ರವಾಸಿಗರು ವಿಶ್ವದ ಕೆಲ ಅತ್ಯಾಧುನಿಕ ಫೈಟರ್ ಜೆಟ್ ಗಳು, ಹೆಲಿಕಾಪ್ಟರ್ ಗಳು ಮತ್ತು ಡ್ರೋನ್ ಗಳನ್ನು ಇಲ್ಲಿ ನೋಡಬಹುದು.

Category
ಕರಾವಳಿ ತರಂಗಿಣಿ