ಬೆಂಗಳೂರು: 'ಕಷ್ಟಕರ ಪರಿಸ್ಥಿತಿಗಳಲ್ಲಿ ದೇಶವನ್ನು ರಕ್ಷಿಸುವ ನಮ್ಮ ರಕ್ಷಣಾ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಮತ್ತು ಅದರ ಸಂಸ್ಥೆಗಳು ಕನಿಷ್ಠ ಗೌರವದಿಂದಲಾದರೂ ನಡೆಸಿಕೊಳ್ಳಬೇಕು' ಎಂದು ತಿಳಿಸಿರುವ ಹೈಕೋರ್ಟ್, ನಿವೃತ್ತ ಸೇನಾ ಸಿಬ್ಬಂದಿಗೆ ಹಂಚಿಕೆಯಾಗಿರುವ ನಿವೇಶನದ ಕ್ರಯಪತ್ರ ಮಾಡಿಕೊಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಆದೇಶ ನೀಡಿದೆ.
ಅಲ್ಲದೇ, ಸುಮಾರು ಮೂರು ದಶಕಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ರಕ್ಷಣಾ ಸಿಬ್ಬಂದಿಗೆ ಮುಡಾ 'ಅತ್ಯಲ್ಪ' ಗೌರವ ನೀಡದೇ ನಡೆಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎನ್‌ಬಿಎಂ ಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜಿ.ಬಸವರಾಜು ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ದೇಶಕ್ಕಾಗಿ ಮೂರು ದಶಕಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ, ಗಡಿಯಲ್ಲಿ ದೇಶವನ್ನು ಕಾದಿದ್ದಾರೆ. ಆದರೆ ಮುಡಾ ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಸೇವೆಯಲ್ಲಿದ್ದಾಗ ಅವರು ಗಳಿಸಿರುವ ಗೌರವ ಅರ್ಥಮಾಡಿಕೊಳ್ಳುವಲ್ಲಿ ಮುಡಾ ಅಧಿಕಾರಿಗಳು ವಿಫಲರಾಗಿದ್ದಾರೆ.
ಹಾಗಾಗಿ ಮುಡಾ ಅಧಿಕಾರಿಗಳು ಅರ್ಜಿದಾರರರಿಗೆ ಹಂಚಿಕೆಯಾಗಿರುವ ನಿವೇಶನದ ಕ್ರಯಪತ್ರ ಮಾಡಿಕೊಡಬೇಕು, ನಿವೇಶನವನ್ನು ಅವರ ಸುಪರ್ದಿಗೆ ಒಪ್ಪಿಸಬೇಕು ಇಲ್ಲವೇ ಸಮಾನ ವಿಸ್ತ್ರೀರ್ಣ ಮತ್ತು ಮೌಲ್ಯದ ಪರ್ಯಾಯ ನಿವೇಶನವನ್ನು 8 ವಾರಗಳಲ್ಲಿ ಹಂಚಿಕೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.