ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಜೊತೆಗೆ ಕಿರುಕುಳ ತಪ್ಪಿಸಲು ಇರುವ ನಿಯಮಗಳ ಪಾಲನೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.
ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು, ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುವ ಪದ್ಧತಿ ರೂಢಿಯಲ್ಲಿದೆ. ಬಹುತೇಕರು ಪಡೆದ ಸಾಲವನ್ನು ವಾಪಸ್ ನೀಡುತ್ತಾರೆ. ಆದರೆ, ಕೆಲವು ವ್ಯಕ್ತಿಗಳು ಸಾಮಾಜಿಕ, ವೈಯಕ್ತಿಕ ಅಥವಾ ಉತ್ಪಾದಕವಲ್ಲದ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವುದರಿಂದ, ಮರುಪಾವತಿ ಕ್ಷಮತೆ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಲ ನೀಡಿದವರು ಮರು ವಸೂಲಿಗಾಗಿ ಒತ್ತಾಯಿಸುತ್ತಾರೆ. ಕೆಲವೆಡೆ ಇದು ಕಿರುಕುಳವಾಗಿ ಬೆಳೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಸ್ ತಿಳಿಸಿದ್ದಾರೆ.
ಜನವರಿ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿತ್ತು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕರ್ನಾಟಕ ವಲಯದ ಅಧ್ಯಕ್ಷರು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಪ್ರಾಂತೀಯ ನಿರ್ದೇಶಕರು ಹಾಗೂ ಸಾ-ಧನ್ (SA-DHAN), ಎಕೆಎಂಐ, ಎಂಎಫ್ಐಎನ್ ಮತ್ತು ಪ್ರಮುಖ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿ ಸಂಚಾಲಕರು, ಅಧಿಕಾರಿಗಳು, ಪೊಲೀಸ್, ಕಂದಾಯ, ಸಹಕಾರ ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ, ಕಿರುಕುಳ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೆಶನ ನೀಡಿದ್ದಾರೆ ಎಂದಿದ್ದಾರೆ.