ಶಿವಮೊಗ್ಗ: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಚುನಾವಣೆ 8-10 ದಿನದಲ್ಲಿ ನಡೆಯಲಿದ್ದು, ತಾವೇ ಚುನಾವಣೆಯಲ್ಲಿ ಗೆದ್ದು ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸವನ್ನು ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, "8-10 ದಿನದಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ನಡೆದು ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಭಾರತೀಯ ಜನತಾ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಭವಿಷ್ಯ ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಇಷ್ಟೊಂದು ವ್ಯವಸ್ಥಿತವಾಗಿ ಸಂಘಟನೆಯ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ".
"ಮಂಡಲ, ಜಿಲ್ಲಾ, ರಾಜ್ಯಾಧ್ಯಕ್ಷರ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಎಲ್ಲವು ಸಹ ವ್ಯವಸ್ಥಿತವಾಗಿ ನಮ್ಮ ಕೇಂದ್ರೀಯ ವರಿಷ್ಠರು ನಿರ್ಧಾರ ಮಾಡಿದಂತೆ ನಡೆಯುತ್ತದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮ್ಮ ಪಕ್ಷದ ಹಿರಿಯರು, ಕಾರ್ಯಕರ್ತರು ಒಟ್ಟಾಗಿ ಈ ಭ್ರಷ್ಟ, ದುಷ್ಟ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನನ್ನ ಕಳೆದ ಒಂದು ವರ್ಷದ ಅವಧಿ ನಾನು ಯಾವ ರೀತಿಯಲ್ಲಿ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆಂದು ರಾಜ್ಯದ ಜನತೆಗೆ, ಕಾರ್ಯಕರ್ತರಿಗೆ, ನಮ್ಮ ಪಕ್ಷದ ಹಿರಿಯರಿಗೆ, ಶಾಸಕರಿಗೆ ತಿಳಿದಿದೆ. ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಪಕ್ಷದ ಅಧ್ಯಕ್ಷನಾಗಿ ಮುಂದುವರೆಯುತ್ತನೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.