ಬೆಂಗಳೂರು : ಅರಣ್ಯ ಹಕ್ಕು ಕಾಯ್ದೆ ಅಡಿ ಸೌಲಭ್ಯಕ್ಕಾಗಿ ಪಟ್ಟಾ ಜಮೀನು ಹೊಂದಿರುವವರೂ ಅರ್ಜಿ ಹಾಕಿದ್ದರೆ ಪರಿಶೀಲಿಸಿ ಕೈಬಿಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.
ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಸಚಿವರು, ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಹ ಫಲಾನುಭವಿಗಳಿಗೆ ಅಂದರೆ 2005ರ ಡಿಸೆಂಬರ್ 13ಕ್ಕೆ ಮೊದಲು ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಬಳಸುತ್ತಿರುವ ಮತ್ತು ಅರಣ್ಯದಲ್ಲಿ ವಾಸಿಸುತ್ತಿರುವವರಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ ಅಡಿ ಇನ್ನೂ ಸಾವಿರಾರು ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿರುವ ಸಚಿವರು, ಕಂದಾಯ ಭೂಮಿ (ಪಟ್ಟಾ ಜಮೀನು) ಮಾಲಿಕತ್ವ ಹೊಂದಿರುವವರೂ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರೆ ಪರಿಶೀಲಿಸಿ ಕ್ರಮ ವಹಿಸಲು ಸೂಚಿಸಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿರುವವರಿಂದ ತಮಗಾಗಲೀ, ತಮ್ಮ ಕುಟುಂಬದ ಸದಸ್ಯರಿಗಾಗಲೀ 2005ರ ಡಿಸೆಂಬರ್ 13ಕ್ಕೆ ಮೊದಲು ಅರಣ್ಯ ಮತ್ತು ಪಟ್ಟಾ ಜಮೀನು ಸೇರಿದಂತೆ 3 ಎಕರೆಗಿಂತ ಹೆಚ್ಚು ಜಮೀನು ಇರಲಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ (ಡಿಕ್ಲರೇಷನ್) ಬರೆಸಿಕೊಳ್ಳಲು ಮತ್ತು ‘ನಮೂನೆ-ಎ’ಯಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಮತ್ತು ನಿಯಮಾನುಸಾರ ಪರಿಶೀಲಿಸಲು ಹಾಗೂ ತಪ್ಪು/ಸುಳ್ಳು ಮಾಹಿತಿ ಒದಗಿಸಿ ಕ್ಲೇಮ್ ಅರ್ಜಿ ಸಲ್ಲಿಸಿರುವವರನ್ನು ಅರಣ್ಯಹಕ್ಕು ಕಾಯ್ದೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲು ಸೂಚಿಸಿದ್ದಾರೆ.