ಬೆಂಗಳೂರು: ನಕ್ಸಲ್ ಚಳವಳಿಯಲ್ಲಿ ಸಕ್ರಿಯನಾಗಿದ್ದ ಕೋಟೆಹೊಂಡ ರವಿ ಅಲಿಯಾಸ್ ರವೀಂದ್ರ ನೆಮ್ಮಾರ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ 4 ಕಿ.ಮೀ ದೂರದಲ್ಲಿನ ಅರಣ್ಯ ಐಬಿಯಲ್ಲಿ ಶರಣಾಗಿದ್ದಾರೆ.
ಕೊನೆಯ ಭೂಗತ ನಕ್ಸಲ್ (ಯುಜಿ ನಕ್ಸಲ್) ಎಂದು ಗುರುತಿಸಲ್ಪಟ್ಟಿದ್ದ ಕೋಟೆಹೊಂಡ ರವಿ ಸಮಾಜದ ಮುಖ್ಯವಾಹಿನಿ ಬರಲು ಶರಣಾಗಿದ್ದು, ಶರಣಾಗತಿ ಪ್ರಕ್ರಿಯೆಗಾಗಿ ಚಿಕ್ಕಮಗಳೂರಿಗೆ ಕರೆದೊಯ್ಯಲಾಗಿದೆ. ಅಲ್ಲದೇ ವರ್ಷಗಳಿಂದ ಭೂಗತರಾಗಿರುವ ನಕ್ಸಲ್ ತೊಂಬಟ್ಟು ಲಕ್ಷ್ಮಿ ಸಹ ಶರಣಾಗಲು ನಿರ್ಧರಿಸಿದ್ದು, ನಾಳೆ ಚಿಕ್ಕಮಗಳೂರು/ಉಡುಪಿಯಲ್ಲಿ ಶರಣಾಗಲಿದ್ದಾರೆ ಎಂಬ ಮಾಹಿತಿಯನ್ನ ರಾಜ್ಯ ಗುಪ್ತಚರ ಇಲಾಖೆ ಖಚಿತಪಡಿಸಿದೆ.
ಉಡುಪಿ ಜಿಲ್ಲೆಯ ಹೆಬ್ರಿ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ಕಮಾಂಡರ್ ವಿಕ್ರಮ್ ಗೌಡ ಹತ್ಯೆಯಾಗಿತ್ತು. ವಿಕ್ರಂ ಗೌಡನ ತಂಡದಲ್ಲಿದ್ದ ಚಿಕ್ಕಮಗಳೂರು ಭಾಗದ ರವಿ ಕೂಡಾ ಹಲವು ವರ್ಷಗಳಿಂದ ಮಾವೋವಾದಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು. ವಿಕ್ರಂ ಗೌಡ ಎನ್ಕೌಂಟರ್ ಬಳಿಕ ತಂಡದಿಂದ ಬೇರ್ಪಟ್ಟು ಭೂಗತನಾಗಿದ್ದರು.
ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡಿದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪದಕ ಪ್ರಶಸ್ತಿ ಘೋಷಿಸಿದ್ದಾರೆ.