ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟವು ಹಾಲು ಉತ್ಪಾದಕ ರೈತರಿಂದ ಖರೀದಿ ಮಾಡುವ ಪ್ರತಿ ಕೆಜಿ ಹಾಲಿಗೆ 2 ರೂ ಹೆಚ್ಚಳ ಮಾಡಿದೆ. ಈ ಕುರಿತು ಶಿಮೂಲ್ ತನ್ನ ಸಭೆಯಲ್ಲಿ ತೀರ್ಮಾನಿಸಿ ರೈತರಿಗೆ ಗುಡ್ ನ್ಯೂಸ್ ನೀಡಿದೆ.
ಶಿಮೂಲ್ ತನ್ನ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಹಾಲು ಖರೀದಿ ದರವನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದೆ. ಬೇಸಿಗೆ ಹಂಗಾಮಿನಲ್ಲಿ ಹೈನು ರಾಸುಗಳ ನಿರ್ವಹಣಾ ವೆಚ್ಚ ಅಧಿಕವಾಗುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿ ಲಾಭಾಂಶ ಕಡಿಮೆ ಆಗುವುದರಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಸಲುವಾಗಿ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲು ಖರೀದಿ ದರವನ್ನು ಪ್ರತಿ ಕೆಜಿಗೆ ರೂ. 2.00 ಹೆಚ್ಚಿಸಿ ಪರಿಷ್ಕರಿಸಲು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ ಅವರ ಅಧ್ಯಕ್ಷತೆಯಲ್ಲಿ ಜ.31 ರಂದು ನಡೆದ ಒಕ್ಕೂಟದ 453ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಒಕ್ಕೂಟದಿಂದ ಸಂಘಗಳಿಗೆ ಪ್ರಸ್ತುತ ಎಫ್‌ಎಟಿ 4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಕೆ.ಜಿ ಹಾಲಿಗೆ 32.09 ರೂ. ಪರಿಷ್ಕೃತ ದರ 34.18 ರೂ. ಸಂಘದಿಂದ ಉತ್ಪಾದಕರಿಗೆ ಪ್ರಸ್ತುತ ಎಫ್‌ಎಟಿ 4.0%, ಎಸ್‌ಎನ್‌ಎಫ್ 8.50% ಇರುವ ಪ್ರತಿ ಲೀ. ಹಾಲಿಗೆ 30.13 ರೂ. ಪರಿಷ್ಕೃತ ದರ 32.22 ರೂ. ಪರಿಷ್ಕೃತ ದರ ದಿ : 01/02/2025 ರಿಂದ ದಿ: 31/03/2025 ರವರೆಗೆ ಜಾರಿಯಲ್ಲಿರುತ್ತದೆ.