image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕು ಜಾರಿ: ಆರೋಗ್ಯ ಇಲಾಖೆ ಮಹತ್ವದ ಆದೇಶ

ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕು ಜಾರಿ: ಆರೋಗ್ಯ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ತೀವ್ರ ಅನಾರೋಗ್ಯಕ್ಕೊಳಗಾಗಿ ಯಾವುದೇ ಚಿಕಿತ್ಸೆ ನೀಡಿದರೂ ಗುಣಮುಖರಾಗಲು ಸಾಧ್ಯವೇ ಇಲ್ಲದ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಸುಪ್ರೀಂಕೋರ್ಟ್‌ನ ಆದೇಶದಂತೆ ಕರ್ನಾಟಕದಲ್ಲಿ ಈ ಐತಿಹಾಸಿಕ ಕಾನೂನು ಜಾರಿ ಮಾಡಲಾಗಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದು, ಚೇತರಿಕೆಯೇ ಕಾಣದೆ ಜೀವನಪೂರ್ತಿ ಸಂಕಷ್ಟ ಅನುಭವಿಸುವ ಸ್ಥಿತಿಯಲ್ಲಿ ಇರುವವರಿಗೆ ಈ ಅವಕಾಶ ಕಲ್ಪಿಸಲಾಗಿದೆ. ದಯಾಮರಣಕ್ಕೆ ಅವಕಾಶ ನೀಡುವುದನ್ನು ನಿರ್ಧರಿಸಲು ಮೂವರು ವೈದ್ಯರನ್ನು ಒಳಗೊಂಡ ಎರಡು ಬೋರ್ಡ್​​​​ಗಳ ಸ್ಥಾಪನೆ ಮಾಡುವ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರೋಗಿಯು ಘನತೆಯಿಂದ ಸಾಯುವ ಹಕ್ಕಿನ ಸಂಬಂಧ ಜಿಲ್ಲಾಮಟ್ಟದಲ್ಲಿ ತಜ್ಞ ವೈದ್ಯರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯು ರೋಗಿ ಯಾವುದೇ ಚಿಕಿತ್ಸೆ ನೀಡಿದರೂ ಬದುಕುಳಿಯಲ್ಲ ಎಂದು ದೃಢಪಡಿಸಿದ ನಂತರ ಘನತೆಯಿಂದ ಸಾಯಲು ಅವಕಾಶ ಕೊಡುವ ನಿರ್ಧಾರ ಕೈಗೊಳ್ಳಲಿದೆ.

ಒಬ್ಬ ರೋಗಿಯು ಗಂಭೀರ ಕಾಯಿಲೆಯಿಂದ ಅಸ್ವಸ್ಥನಾಗಿ ಚೇತರಿಕೆ ಅಥವಾ ಗುಣಮುಖರಾಗುವ ಆಶಾಭಾವನೆ ಹೊಂದಿಲ್ಲದೆ, ಸುದೀರ್ಘ ಅವಧಿಯಿಂದ ಚಿಕಿತ್ಸೆ ಪಡೆಯುತ್ತಿದ್ದರೆ ಹಾಗೂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲದಿದ್ದ ಸಂದರ್ಭದಲ್ಲಿ ನಿಗದಿತ ಕಾರ್ಯವಿಧಾನಕ್ಕೆ ಪೂರಕವಾಗಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಈಗ ರಾಜ್ಯ ಸರ್ಕಾರ ಕೋರ್ಟ್​​​ನ ನಿರ್ದೇಶನವನ್ನು ಅನುಷ್ಠಾನಗೊಳಿಸುವ ಸಂಬಂಧ ಈ ಆದೇಶ ಹೊರಡಿಸಿದೆ.

ಚೇತರಿಕೆಯ ಭರವಸೆ ಇಲ್ಲದೇ ಮಾರಕ ರೋಗದಿಂದ ಬಳಲುತ್ತಿರುವವರಿಗೆ ಅಥವಾ ನಿರಂತರ ಕೋಮಾ ಸ್ಥಿತಿಯಲ್ಲಿರುವವರು ಮತ್ತು ಯಾವುದೇ ಚಿಕಿತ್ಸೆ ನೀಡಿದರೂ ಬದುಕುವುದಿಲ್ಲ ಎಂಬ ರೋಗಿಗಳಿಗೆ ಈ ಆದೇಶದಿಂದ ಅವರು ಘನತೆಯಿಂದ ಸಾವನ್ನಪ್ಪಲು ಅವಕಾಶ ಸಿಕ್ಕಿದಂತಾಗುತ್ತದೆ.

Category
ಕರಾವಳಿ ತರಂಗಿಣಿ