ಬೆಂಗಳೂರು: ಗೇರುಸೊಪ್ಪ ಮತ್ತು ಲಿಂಗನಮಕ್ಕಿ ಜಲಾಶಯಗಳ ನಡುವೆ ಶರಾವತಿ ವನ್ಯಜೀವಿಧಾಮ ಅರಣ್ಯ ಪ್ರದೇಶದಲ್ಲಿ ನಡೆಯಲಿರುವ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆ ಶರಾವತಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಯೋಜನೆಗೆ 125 ಎಕರೆ ಅರಣ್ಯ ಭೂಮಿ ನೀಡುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಯೋಜನೆಗೆ ಅರಣ್ಯ ಪ್ರದೇಶದ ಸುಮಾರು 16 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
16 ಸಾವಿರ ಮರಗಳ ಬದಲಿಗೆ 8ರಿಂದ 9 ಸಾವಿರ ಮರಗಳು ಮಾತ್ರ ಕಡಿಯುವಂತೆ ಸೂಚನೆ ನೀಡಲಾಯಿತು. ಜೊತೆಗೆ, ಶರಾವತಿ ವನ್ಯಜೀವಿಧಾಮ ಅಪರೂಪದ ವನ್ಯಜೀವಿಯಾದ ಸಿಂಹಬಾಲ ಸಿಂಗಳಿಕಗಳ ವಾಸಸ್ಥಾನವಾಗಿದೆ. ಯೋಜನೆ ಕಾಮಗಾರಿಯಿಂದ ಅವುಗಳ ವಾಸಸ್ಥಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಯಿತು. ಕೇವಲ 125 ಎಕರೆ ಅರಣ್ಯ ಪ್ರದೇಶದಲ್ಲಷ್ಟೇ ಕಾಮಗಾರಿ ನಡೆಸಬೇಕು. ಅದನ್ನು ಮೀರಿ ಯೋಜನೆ ಕೈಗೊಳ್ಳಬಾರದೆಂಬ ಷರತ್ತುಗಳನ್ನು ವಿಧಿಸಿ ಅನುಮೋದನೆ ನೀಡಲಾಯಿತು.