ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಷಯದ ಪಠ್ಯ ವಿವಾದಕ್ಕೆ ಗುರಿಯಾಗಿದೆ. ವಿವಿಯ ಪ್ರಸಾರಂಗದಿಂದ ಮುದಿತ್ರವಾಗಿರುವ ಕನ್ನಡ ವಿಷಯದ ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ವಿಷಯಗಳಿವೆ ಎಂಬ ಆರೋಪ ಕೇಳಿಬಂದಿದೆ.
ಬಿಎ, ಬಿ ಮ್ಯೂಸಿಕ್, ಬಿಎಫ್ಎ, ಬಿಎಸ್ಡಬ್ಲ್ಯು, ಬಿವಿಎ, ಬಿಎಸ್ಸಿ ಸೇರಿದಂತೆ ಕೆಲ ಪದವಿಗಳ ಪ್ರಥಮ ಸೆಮಿಸ್ಟರ್ನ 'ಬೆಳಗು 1' ಕನ್ನಡ ಪಠ್ಯ ಪುಸ್ತಕದಲ್ಲಿನ ರಾಷ್ಟ್ರೀಯ ಆಚರಣೆಯ ಸುತ್ತ ಎಂಬ ಅಧ್ಯಾಯದಲ್ಲಿನ ಕೆಲ ವಿಷಯಗಳು ಆಕ್ಷೇಪಾರ್ಹವಾಗಿವೆ. ಈ ಪಠ್ಯ ಪುಸ್ತಕ ವಾಪಸ್ ಪಡೆದು, ಇದಕ್ಕೆ ಕಾರಣರಾದವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಹಿರಿಯ ನ್ಯಾಯವಾದಿ ಅರುಣ ಜೋಶಿ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಅದರಲ್ಲೂ ವಿಶ್ವವಿದ್ಯಾಲಯದಂತಹ ಸಂಸ್ಥೆಯಲ್ಲಿ ಈ ರೀತಿಯ ಪಾಠ ಸೇರಿಸಿರುವುದು ಸಂವಿಧಾನ ವಿರೋಧಿ, ದೇಶ ವಿರೋಧಿ ಮತ್ತು ಭಾರತದ ಏಕತೆಯ ವಿರೋಧಿಯಾಗಿದೆ. ಈ ಕುರಿತು ಶಿಸ್ತು ಕ್ರಮ ಆಗದಿದ್ದರೆ, ಕೋರ್ಟ್ನಲ್ಲಿ ಪ್ರಕರಣ ದಾಖಲಿಸುತ್ತೇವೆ. ಜೊತೆಗೆ ರಾಜ್ಯಪಾಲರು ಮತ್ತು ಯುಜಿಸಿಗೂ ದೂರು ನೀಡುತ್ತೇವೆ ಎಂದು ಅರುಣ್ ಜೋಶಿ ತಿಳಿಸಿದ್ದಾರೆ.
ವಿವಿ ನಿಯಮಾನುಸಾರ ವಿಶೇಷ ಬಿಒಎಸ್ ಸಭೆ ನಡೆಸಿ, ಅವರು ನೀಡಿರುವ ನಿರ್ಣಯದ ಪ್ರಕಾರ ಡೀನ್ ಕಮಿಟಿಯಲ್ಲಿ ಚರ್ಚಿಸಿ, ಬೆಳಗು 1 ಪಠ್ಯ ಪುಸ್ತಕದ ಪರಿಷ್ಕರಣೆ ಕುರಿತು ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಸಂವಿಧಾನದ ತಜ್ಞರು, ಕನ್ನಡ ಭಾಷಾ ತಜ್ಞರು ಸೇರಿದಂತೆ ನಾಲ್ವರು ವಿಷಯ ತಜ್ಞರಿದ್ದಾರೆ. ಈ ಸಮಿತಿ ಕೊಡುವ ವರದಿ ಮತ್ತು ಸಲಹೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಧಾರವಾಡದ ಕವಿವಿ ಕುಲಪತಿ ಡಾ. ಎಸ್. ಜಯಶ್ರೀ ಮಾಹಿತಿ ನೀಡಿದ್ದಾರೆ.