image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

OPS ಜಾರಿಗೆ ಸರ್ಕಾರಿ ನೌಕರರ ಬಿಗಿಪಟ್ಟು

OPS ಜಾರಿಗೆ ಸರ್ಕಾರಿ ನೌಕರರ ಬಿಗಿಪಟ್ಟು

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಇದೀಗ ಹಳೆಯ ಪಿಂಚಣಿ ಯೋಜನೆ (OPS) ತಲೆನೋವು ಶುರುವಾಗಿದೆ. ಸರ್ಕಾರಿ ನೌಕರರು ಒಪಿಎಸ್ ಜಾರಿಗೆ ಪಟ್ಟು ಹಿಡಿದಿದ್ದು, ಹೋರಾಟದ ಹಾದಿ ಹಿಡಿಯಲು ತೀರ್ಮಾನಿಸಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಈಗಾಗಲೇ ಪಂಚ ಗ್ಯಾರಂಟಿ ಹೊರೆ, ಮಿತಿ ಮೀರಿದ ಬದ್ಧ ವೆಚ್ಚದ ಬರೆ, ಗುರಿ ಮುಟ್ಟದ ಆದಾಯ ಸಂಗ್ರಹದ ಆರ್ಥಿಕ ಮುಗ್ಗಟ್ಟಿನ ಮಧ್ಯೆ ರಾಜ್ಯ ಸರ್ಕಾರದ ಮುಂದೆ ಇದೀಗ ಒಪಿಎಸ್ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ, ರಾಜ್ಯದಲ್ಲಿ ಒಪಿಎಸ್ ಅನುಷ್ಠಾನ ಮಾಡುವಂತೆ ಬಿಗಿ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಫೆಬ್ರವರಿಯಲ್ಲಿ ಒಪಿಎಸ್ ಹಕ್ಕೊತ್ತಾಯ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಬಜೆಟ್ ತಯಾರಿಯಲ್ಲಿರುವ ಸಿಎಂ ಸಿದ್ದರಾಮಯ್ಯಗೆ ಒಪಿಎಸ್ ಕಗ್ಗಂಟು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ರಾಜ್ಯದಲ್ಲಿ ಎನ್​ಪಿಎಸ್​ ರದ್ದುಗೊಳಿಸಿ, ಒಪಿಎಸ್​ ಜಾರಿಯ ಭರವಸೆ ನೀಡಿತ್ತು. ಹೀಗಾಗಿ, ಇದೀಗ ಒಪಿಎಸ್ ವಿಚಾರ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಆರ್ಥಿಕ ಹೊರೆಯ ಮಧ್ಯೆ ಒಪಿಎಸ್ ಭಾರ ಅಕ್ಷರಶಃ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ. ಆದರೆ, ನುಡಿದಂತೆ ನಡೆಯುವ ಅಡಕತ್ತರಿಯಲ್ಲಿ ಕಾಂಗ್ರೆಸ್ ಸರ್ಕಾರ ಸಿಲುಕಿದೆ.

ಒಪಿಎಸ್ ಜಾರಿಗೆ ಪಟ್ಟು ಹಿಡಿದಿರುವ ಕರ್ನಾಟಕ ರಾಜ್ಯ ಸರ್ಕಾರಿ​​ ನೌಕರರ ಸಂಘದಿಂದ ಫೆ.7ರಂದು ಒಪಿಎಸ್ ಹಕ್ಕೊತ್ತಾಯ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಜ.19ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.‌ ರಾಜ್ಯ ಸರ್ಕಾರಿ ನೌಕರರು ನಮಗೆ ಎನ್​ಪಿಎಸ್​​ ಬೇಡವೇ ಬೇಡ, ಕೇಂದ್ರ ಸರ್ಕಾರದ ಹೊಸ ಏಕೀಕೃತ ಪಿಂಚಣಿ ಯೋಜನೆಯೂ (UPS) ಬೇಡ ಎಂದು ಪಟ್ಟು ಹಿಡಿದಿದ್ದು, ನಮಗೆ ಒಪಿಎಸ್​​ ಬಿಟ್ಟು ಬೇರೇನು ಬೇಡ ಎಂದು ಬೀದಿಗಿಳಿಯಲು ಮುಂದಾಗಿದ್ದಾರೆ.

Category
ಕರಾವಳಿ ತರಂಗಿಣಿ