ಬೆಂಗಳೂರು: ''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಬಹಳ ಚೆನ್ನಾಗಿದೆ. ಘಟನೆಗಳು ಆಗುವುದು ಮೊದಲೇ ಗೊತ್ತಾದರೆ, ಅದು ಆಗುವುದಕ್ಕೆ ಬಿಡಲ್ಲ'' ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ''ಕೊಲೆಗಳು, ಬ್ಯಾಂಕ್ ದರೋಡೆಗಳು ಆಗುತ್ತಿವೆ. ಈ ಪ್ರಕರಣಗಳು ನಡೆಯುವಾಗ ಅಲ್ಲಿರುವ ಲೋಪಗಳನ್ನೂ ನಾವು ಗಮನಿಸಬೇಕು. ಬೀದರ್ನಲ್ಲಿ ಎಟಿಎಂಗೆ ಹಣ ತುಂಬುವ ವಾಹನದಲ್ಲಿ ಆವತ್ತು ಆರ್ಮ್ಡ್ ಗಾರ್ಡ್ ಇರಲಿಲ್ಲ. ಅವರು ಎಚ್ಚರಿಕೆ ವಹಿಸಿಕೊಳ್ಳಬೇಕಿತ್ತು. ಹಾಗಾಗಿ ಆ ರೀತಿ ಆಗಿದೆ. ಬ್ಯಾಂಕ್ ದರೋಡೆ ವೇಳೆ ಬ್ಯಾಂಕ್ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತ ಹೇಳೋದು ಸರಿಯಲ್ಲ'' ಎಂದು ಹೇಳಿದರು.
''ಬಿಜೆಪಿ ಅಧಿಕಾರದಲ್ಲಿದ್ದಾಗ ಎಲ್ಲೆಲ್ಲಿ ಇಂತಹ ಘಟನೆಗಳು ಆಗಿದೆ ಅಂತ ನಾನು ಅಂಕಿ - ಅಂಶ ಕೊಡುತ್ತೇನೆ. ಅವರ ಆಡಳಿತದ ಅವಧಿಯಲ್ಲಿ ಆಗಿರುವ ಘಟನೆಗಳನ್ನು ಮರೆತು ಬಿಟ್ಟಿರಬೇಕು. ಅವರ ಕಾಲದಲ್ಲಿ ಎಷ್ಟು ಕೊಲೆಗಳಾಗಿದ್ದವು, ಎಷ್ಟು ರೇಪ್ ಆಗಿದ್ದವು ಅಂತ ಸಂದರ್ಭ ಬಂದಾಗ ನಾನು ಮಾಹಿತಿ ಕೊಡುತ್ತೇನೆ. ಇದೆಲ್ಲವು ಸಾರ್ವಜನಿಕರಿಗೂ ಗೊತ್ತಾಗಲಿ'' ಎಂದು ತಿರುಗೇಟು ನೀಡಿದರು.
ಮುಡಾ ಪ್ರಕರಣದಲ್ಲಿ ಇ.ಡಿಯಿಂದ ಆಸ್ತಿ ಜಪ್ತಿ, ಬಿಜೆಪಿಯಿಂದ ಸಿಎಂ ರಾಜೀನಾಮೆಗೆ ಒತ್ತಾಯ ವಿಚಾರವಾಗಿ ಮಾತನಾಡುತ್ತ, ''ಬಿಜೆಪಿಯವರಿಗೆ ಬೇಕಿರುವುದೇ ಸಿಎಂ ರಾಜೀನಾಮೆ. ಮೊದಲಿಂದಲೂ ಅವರು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದರಲ್ಲಿ ಹೊಸದೇನಿಲ್ಲವಲ್ಲ. ಇ.ಡಿಯವರು ಕಾನೂನು ಪ್ರಕಾರ ಕ್ರಮ ವಹಿಸಲಿ. ಜಪ್ತಿಯಾಗಿರುವ ಅಸ್ತಿಗಳಲ್ಲಿ ಸಿದ್ದರಾಮಯ್ಯ ಅವರ ಸೈಟ್ ಇದೆಯಾ?. ಸುಮ್ನೆ ರಾಜಕೀಯಕ್ಕೆ ಮಾತಾಡುವುದು ಬೇಡ, ದಾಖಲೆ ಇಟ್ಟುಕೊಂಡು ಬಿಜೆಪಿಯವರು ಮಾತಾಡಲಿ. ಸಿದ್ದರಾಮಯ್ಯನವರೇ ಪ್ರಭಾವ ಬೀರಿ ಸೈಟ್ ಪಡೆದಿದ್ದಾರೆ ಅಂತ ಇ.ಡಿಯವರು ಎಲ್ಲೂ ಹೇಳಿಲ್ಲ'' ಎಂದರು.