ಚಿಕ್ಕಮಗಳೂರು: ಇತ್ತೀಚೆಗೆ ಸಿಎಂ ಕಚೇರಿಯಲ್ಲಿ ಶರಣಾಗಿದ್ದ ಆರು ಜನ ನಕ್ಸಲರನ್ನ ಜಿಲ್ಲಾ ಪೊಲೀಸರು ವಿಚಾರಣೆ ಹಾಗೂ ಸ್ಥಳ ಪರಿಶೀಲನೆಗೆ ಜಿಲ್ಲೆಗೆ ಕರೆತಂದಿದ್ದಾರೆ. ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ, ವಸಂತ್ ಹಾಗೂ ಜೀಶ ಅವರನ್ನು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆತರಲಾಗಿದೆ. ಈ ವೇಳೆ ಎಎನ್ಎಫ್ ಪೊಲೀಸರ ಭದ್ರತೆ ಒದಗಿಸಲಾಗಿತ್ತು.
ಮುಂಡಗಾರು ಲತಾ 33, ವನಜಾಕ್ಷಿ 15, ಸುಂದರಿ-ಜಯಣ್ಣ ಮೇಲೆ ತಲಾ 3 ಕೇಸ್ ದಾಖಲಾಗಿದ್ದವು. ವಸಂತ್ ಹಾಗೂ ಜೀಶ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕರಣಗಳಿಲ್ಲ. ಎನ್ಐಎ ಕೋರ್ಟಿನಿಂದ ವಿಚಾರಣೆಗಾಗಿ ಅನುಮತಿ ಪಡೆದಿರುವ ಪೊಲೀಸರು, ಶರಣಾದ ನಕ್ಸಲರನ್ನು ಜಿಲ್ಲೆಗೆ ಕರೆದುಕೊಂಡು ಬಂದಿದ್ದು, 14 ದಿನಗಳವರೆಗೆ ಅವರು ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ.
'ಶಾಂತಿಗಾಗಿ ನಾಗರಿಕ ವೇದಿಕೆಯು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದೆ. ಕರ್ನಾಟಕದಲ್ಲಿ ನಕ್ಸಲಿಸಂ ಕೊನೆಗಾಣಿಸಲು ಅವರ ಬೇಡಿಕೆಗೆ ಸ್ಪಂದಿಸಲು ಏನೆಲ್ಲಾ ಕಾರ್ಯಕ್ರಮ ಅಗತ್ಯವೊ ಅದನ್ನು ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ' ಎಂದು ಸಿಎಂ ಅಭಯ ನೀಡಿದ್ದರು.
ಸಿಎಂ ಸಮ್ಮುಖದಲ್ಲಿ ನಕ್ಸಲರ ಶರಣಾಗತಿಯನ್ನು ಪ್ರತಿಪಕ್ಷಗಳು ವಿರೋಧಿಸಿದ್ದವು. ಆದರೆ ಸರ್ಕಾರ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ.