ಬೆಂಗಳೂರು: ಅವಧಿ ಮೀರಿದರೂ ಅಪಾರ್ಟ್ಮೆಂಟ್ ನಿರ್ಮಾಣ ಪೂರ್ಣಗೊಳಿಸದ ಮತ್ತು ನಿಯಮ ಉಲ್ಲಂಘಿಸುವ ಬಿಲ್ಡರುಗಳ ವಿರುದ್ಧ ರೇರಾ ದಂಡ ಪ್ರಯೋಗ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಇತ್ತ ಬಿಲ್ಡರ್ಗಳಿಂದ ದಂಡ ವಸೂಲಿಯೂ ಆಗುತ್ತಿಲ್ಲ, ಸಂತ್ರಸ್ತ ಗೃಹ ಖರೀದಿದಾರರಿಗೆ ನಿರೀಕ್ಷಿತ ಪರಿಹಾರವೂ ಸಿಗುತ್ತಿಲ್ಲ.
ಗೃಹ ಖರೀದಿದಾರರ ಹಿತರಕ್ಷಣೆಗಾಗಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಣ ಪಡೆದು ವರ್ಷಾನುಗಟ್ಟಲೆ ಅಪಾರ್ಟ್ಮೆಂಟ್, ಮನೆ ನಿರ್ಮಾಣ ಮಾಡಿಕೊಡದೇ ಸತಾಯಿಸುವ ಬಿಲ್ಡರುಗಳು, ಪ್ರವರ್ತಕರ ಮೇಲೆ ನಿಯಂತ್ರಣ ಹೇರಲು ಈ ಕಾಯ್ದೆ ಜಾರಿಗೆ ತರಲಾಗಿತ್ತು. ರಾಜ್ಯದಲ್ಲೂ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ರಾಜ್ಯದ ಗೃಹ ಖರೀದಿದಾರರ ಹಿತ ಕಾಯ್ದುಕೊಳ್ಳುವ ಉದ್ದೇಶದಿಂದ ಕೆ-ರೇರಾ ಅಸ್ತಿತ್ವಕ್ಕೆ ಬಂದಿದೆ. ಆದರೆ, ರೇರಾ ಹಲ್ಲಿಲ್ಲದ ಹಾವಿನಂತಾಗಿದೆ ಎಂಬುದು ಸಂತ್ರಸ್ತ ಗೃಹ ಖರೀದಿದಾರರ ಆರೋಪವಾಗಿದೆ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಬಿಲ್ಡರ್‌ಗಳು ಮತ್ತು ಪ್ರವರ್ತಕರ ಮೇಲೆ ರೇರಾ ನ್ಯಾಯಾಧೀಕರಣ ದಂಡ ವಿಧಿಸುತ್ತದೆ. ಅಪಾರ್ಟ್ಮೆಂಟ್ ನಿರ್ಮಾಣ ಪೂರ್ಣ ಮಾಡದೇ ವಿಳಂಬ ಮಾಡುವ ಬಿಲ್ಡರುಗಳ ಮೇಲೆ ಕಾಯ್ದೆಯಂತೆ ದಂಡ ವಿಧಿಸಲಾಗುತ್ತದೆ. ಬಿಲ್ಡರುಗಳಿಂದ ದಂಡ ರಿಕವರಿಗಾಗಿ ರೇರಾ ನ್ಯಾಯಾಧೀಕರಣ ಆದೇಶ ಹೊರಡಿಸುತ್ತದೆ. ಆದರೂ ಬಿಲ್ಡರುಗಳು ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಯೋಜನೆಗಳನ್ನು ಪೂರ್ಣಗೊಳಿಸದೇ ವಿಳಂಬ ನೀತಿ ಅನುಸರಿಸುತ್ತಿರುವುದು ಮುಂದುವರಿದಿದೆ.