image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೈಸೂರಿನಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆ

ಮೈಸೂರಿನಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆ

ಮೈಸೂರು : ಮೈಸೂರಿನ ಕೆ. ಆರ್ ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಕೇಂದ್ರ (RPF) ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ.

ನವದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರ ಮನವಿಗೆ ತತ್ ಕ್ಷಣವೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು, ಇದು ಅತ್ಯಂತ ಮಹತ್ವದ ಪ್ರಸ್ತಾವನೆ. ಈ ಬಗ್ಗೆ ಖುದ್ದು ತಾವೇ ಗಮನ ಹರಿಸುವುದಾಗಿ ತಿಳಿಸಿದರು.

ಮೈಸೂರು ಜಿಲ್ಲೆಯ ಕೆ. ಆರ್ ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ತೆರೆಯುವಂತೆ ರೈಲ್ವೆ ಸಚಿವರಿಗೆ ಕುಮಾರಸ್ವಾಮಿ ಮನವಿ ಪತ್ರ ಸಲ್ಲಿಸಿದರು. ರೈಲ್ವೆ ಸುರಕ್ಷತೆಗೆ ಮೈಸೂರು ಭಾಗದಲ್ಲಿ ಹೆಚ್ಚು ಆದ್ಯತೆ ಕೊಡಬೇಕಿದೆ ಹಾಗೂ ಈ ಭಾಗದಲ್ಲಿ ಪ್ರಯಾಣಿಕರ ದಟ್ಟಣೆಯು ಹೆಚ್ಚಾಗಿದ್ದು, ಒಟ್ಟಾರೆ ರೈಲ್ವೆ ಸುರಕ್ಷತೆಯು ಮಹತ್ವದ ಅಂಶವಾಗಿದೆ ಎಂದು ಮನವಿ ಮಾಡಿಕೊಟ್ಟರು. ಈ ಬಗ್ಗೆ ತಕ್ಷಣವೇ ಗಮನ ಹರಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದರು.

ಹೆಚ್​ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಕೆ. ಆರ್ ನಗರದಲ್ಲಿದ್ದ ಹಳೆಯ ರೈಲು ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಹಳೆಯ ನಿಲ್ದಾಣದ ಜಾಗ ಹಾಗೆಯೇ ಖಾಲಿ ಉಳಿದಿದ್ದು, ಭೂಸ್ವಾಧೀನದ ಸಮಸ್ಯೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು.

ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ಬಂದರೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಸ್ಥಳೀಯ ಯುವಕರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿಮೆಗೆ ಅವಕಾಶ ಲಭ್ಯವಾಗುತ್ತದೆ. ಮೈಸೂರು ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು.

Category
ಕರಾವಳಿ ತರಂಗಿಣಿ