ಬೆಂಗಳೂರು : ಹಳೆಯ ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಭೂಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ, ಹಳೆಯ ಮತ್ತು ಸ್ವಾತಂತ್ರ್ಯಪೂರ್ವದ ಅವಧಿಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್ ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ.
ಡಿಜಿಟಲೀಕರಣದಿಂದ ಅಭಿಲೇಖಾಲಯದ ಸಿಬ್ಬಂದಿಯನ್ನ ಸಂಪರ್ಕಿಸಿ ದಾಖಲೆಗಳನ್ನು ಪಡೆಯುವುದು ತಪ್ಪುತ್ತದೆ. ಅಲ್ಲದೇ ದಾಖಲೆಗಳ ವ್ಯತ್ಯಾಸ, ರೆಕಾರ್ಡ್ ಮಿಸ್ಸಿಂಗ್, ವಿಳಂಬ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿದ್ದು, ನಾಗರೀಕರು ದಾಖಲೆಗಳಿಗಾಗಿ ಕಚೇರಿಗೆ ಭೇಟಿ ನೀಡುವ ಬದಲು ಸುಲಭವಾಗಿ ಆನ್ ಲೈನ್ ಮೂಲಕ ದಾಖಲೆಗಳನ್ನು ಡೌನ್ ಲೋಡ್ ಮಾಡಬಹುದು.
ಭೂಸುರಕ್ಷಾ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆಯ 1 ತಾಲೂಕಿನಂತೆ ರಾಜ್ಯದ ಒಟ್ಟು 31 ತಾಲೂಕುಗಳನ್ನು ಪೈಲೆಟ್ ಕಚೇರಿಯಾಗಿ ಆಯ್ಕೆ ಮಾಡಿ, ಫೆಬ್ರವರಿ-2024 ರಿಂದ ಪೈಲೆಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಂದಾಯ ಆಯುಕ್ತಾಲಯದ ಭೂಮಿ ಉಸ್ತುವಾರಿ ಕೋಶದಿಂದ "ಕಂದಾಯ ದಾಖಲೆಗಳ ಗಣಕೀಕರಣ" ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ.