ಹುಬ್ಬಳ್ಳಿ : ಈಗಾಗಲೇ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ನಡುವೆಯೂ ಕೆಲವರು ಈ ರೀತಿ ಬಂದ್ ಮಾಡುವ ಮೂಲಕ ಜನರಿಗೆ ಸಂಕಷ್ಟ ಎದುರಾಗುವಂತೆ ಮಾಡುತ್ತಿದ್ದಾರೆ. ಈ ಕೂಡಲೇ ಈ ಬಂದ್ ವಾಪಸ್ ಪಡೆಯಬೇಕು. ಅವಳಿನಗರ ಬಂದ್ ವಾಪಸ್ ಪಡೆಯದೇ ಹೋದಲ್ಲಿ ಅದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಬಂದ್ ಕರೆ ನೀಡಬೇಕಾಗುತ್ತದೆ. ಇದರಿಂದಾಗುವ ಸಾರ್ವಜನಿಕ ಸಮಸ್ಯೆಗೆ ಕಾಂಗ್ರೆಸ್ನವರೇ ನೇರ ಹೊಣೆಯನ್ನ ಹೊರಬೇಕಾಗುತ್ತೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹೇಳಿದರು.
ನಗರದಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ. ಬಿ. ಆರ್ ಅಂಬೇಡ್ಕರ್ ಹೆಸರಿನ ಮೂಲಕ ದಲಿತರ ಮತ ಪಡೆಯುವ ತಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಮತ ಬ್ಯಾಂಕ್ ರಾಜಕೀಯದ ಕೆಲಸವನ್ನ ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಜ. 9 ರಂದು ಅವಳಿ ನಗರ ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗೆ ಕಾಂಗ್ರೆಸ್ ಸಮಸ್ಯೆ ತಂದೊಡ್ಡುತ್ತಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ನಡುವೆ ಒಳ ಜಗಳ ಆರಂಭವಾಗಿದೆ. ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಅದು ಕನಸಾಗಿಯೇ ಉಳಿದು ಹೋಗಲಿದೆ. ಸಿದ್ದರಾಮಯ್ಯನವರ ಅಧಿಕಾರದ ಅವಧಿ ಮುಗಿಯುವ ಹಂತಕ್ಕೆ ಬಂದಿದೆ. ಹೀಗಾಗಿ ಕಾಂಗ್ರೆಸ್ನ ಒಬ್ಬೊಬ್ಬ ನಾಯಕರು ಔತಣ ಕೂಟವನ್ನ ಏರ್ಪಡಿಸುತ್ತಿದ್ದಾರೆ ಎಂದು ಬೆಲ್ಲದ್ ಟೀಕಿಸಿದರು.
ಎಸ್. ಎಂ ಕೃಷ್ಣ ಅವರ ಮನೆ ಬಾಗಿಲು ಒದ್ದು ಅಧಿಕಾರ ಪಡೆದುಕೊಂಡಿದ್ದೆ ಎಂದು ಡಿಕೆಶಿ ಹೇಳಿದ್ದಾರೆ. ಅದರಂತೆ ಡಿ. ಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಮನೆ ಬಾಗಿಲು ಒದ್ದು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ ಎಂದು ಕಾಲೆಳೆದರು.