ಬೆಂಗಳೂರು: ಬಿ.ಎಸ್.ಯಡಿಯೂರಪ್ಪ, ಆರ್. ಅಶೋಕ್, ಸಿ.ಟಿ.ರವಿ, ಮುನಿರತ್ನ ಬಳಸಿರುವ ಪದ ಹಾಗೂ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಆರ್ಎಸ್ಎಸ್ ಕಚೇರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಚಾಮರಾಜಪೇಟೆಯ ಕೇಶವ ಕೃಪಾ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಪತ್ರವನ್ನು ಸಲ್ಲಿಕೆ ಮಾಡಿದರು.
"ಪತ್ರದಲ್ಲಿ ಸದಾ ವತ್ಸಲೇ ಮಾತೃಭೂಮಿ ಎಂಬ ನಿಮ್ಮ ಮಾತು ಹಾಗೂ ತಾಯಂದಿರಿಗೆ ನೀಡುವ ಗೌರವದ ಬಗ್ಗೆ ಈಗ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಆರ್ಎಸ್ಎಸ್ ಶಿಸ್ತಿನ ಸಿಪಾಯಿಗಳು ಇದಕ್ಕೆ ಸ್ಪಷ್ಟನೆ ನೀಡಬೇಕು. ರಾಷ್ಟ್ರೀಯ ಸ್ವಯಂಸೇವಾ ಸಂಘವೆಂದರೆ ಅದು ಆರ್ಎಸ್ಎಸ್ ಎಂದು ಎಲ್ಲರಿಗೂ ತಿಳಿದಿದೆ" ಎಂದು ಹೇಳಿದ್ದಾರೆ.
"ನಾನು ಆರ್ಎಸ್ಎಸ್ನ ಶಿಸ್ತಿನ ಸಿಪಾಯಿಗಳು, ಸ್ವಯಂ ಸೇವಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಬಿಜೆಪಿ ನಾಯಕರಾದ ಸಿ.ಟಿ.ರವಿ ಮತ್ತು ಆರ್.ಅಶೋಕ್ ರವರ ಬಾಯಲ್ಲಿ ಬರುತ್ತಿರುವ ಅತ್ಯಂತ ಕೆಟ್ಟ ಪದಗಳು ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರಿಗೆ ಶಾಖೆಗಳಲ್ಲಿ ಇಂತಹ ತರಬೇತಿಯನ್ನು ನೀಡಿದ್ದೀರಾ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಈ ಪತ್ರದ ಮೂಲಕ ಕೋರುತ್ತಿದ್ದೇವೆ" ಎಂದು ಉಲ್ಲೇಖಿಸಿದ್ದಾರೆ.
"ಭಾರತೀಯ ಜನತಾ ಪಕ್ಷ ಪ್ರತಿ ಸಂದರ್ಭದಲ್ಲಿ ಎಲ್ಲಾ ಸಭೆಗಳಲ್ಲೂ ನಾವು ಆರ್ಎಸ್ಎಸ್ನಲ್ಲಿ ತರಬೇತಿಯನ್ನು ಪಡೆದಿದ್ದೇವೆ ಎಂಬ ಮಾತನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಾಗಾದರೆ ಭಾರತೀಯ ಜನತಾ ಪಕ್ಷದ ನಾಯಕರುಗಳು ಇತ್ತೀಚಿನ ದಿನಗಳಲ್ಲಿ ಇಡೀ ರಾಷ್ಟ್ರಕ್ಕೆ ಆರ್ಎಸ್ಎಸ್ನ ಕಟ್ಟಾಳುಗಳಾದ ಸಿ.ಟಿ.ರವಿ ವಿಧಾನ ಪರಿಷತ್ನಲ್ಲಿ ಬಳಸಿರುವ ಪದ ಅದನ್ನು ನಾವು ಹೇಳಲು ಸಾಧ್ಯವಿಲ್ಲ ಅದನ್ನು ನೀವೇ ಅರ್ಥೈಸಿಕೊಳ್ಳಿ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಬಳಸಿರುವ ಆ ಪದವನ್ನು ಈಗಾಗಲೇ ನಿಮ್ಮ ಶಾಖೆಗೆ ತಲುಪಿದೆ ಎಂದು ನಾವು ಭಾವಿಸಿದ್ದೇವೆ" ಎಂದು ತಿಳಿಸಿದ್ದಾರೆ.