ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಡೆದ ಲಾಠಿಚಾರ್ಜ್ ವಿಚಾರ ಸೋಮವಾರ ಮಧ್ಯಾಹ್ನದ ವಿಧಾನ ಪರಿಷತ್ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯ್ತು. ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಿರೋಧ ಪಕ್ಷದ ಸದಸ್ಯರು ಪಟ್ಟು ಹಿಡಿದರೆ, ಗೃಹ ಸಚಿವರು ಯಾವುದೇ ತನಿಖೆಗೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಕಲಾಪ ಬಹಿಷ್ಕರಿಸಿ ಲಾಠಿ ಬೀಸುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ವಿರೋಧ ಪಕ್ಷದ ನಾಯಕರು ಹೊರನಡೆದರು.
ಪಂಚಮಸಾಲಿಗರ ಮೇಲೆ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದ ಪ್ರಕರಣ ತನಿಖೆಗೆ ಒತ್ತಾಯಿಸಿ ಬೆಳಗ್ಗೆ ಪರಿಷತ್ನಲ್ಲಿ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದ್ದರು. ಇದಕ್ಕೆ ಸರ್ಕಾರದ ಪರವಾಗಿ ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಪಂಚಮಸಾಲಿ ಹೋರಾಟದಲ್ಲಿ ನಮ್ಮ ದಾಖಲೆ ಪ್ರಕಾರ 11 ಜನರಿಗೆ ಗಾಯಳಾಗಿದ್ದವು. ಅವರಿಗೆ ನೀಡಬೇಕಾದ ಅಗತ್ಯ ಚಿಕಿತ್ಸೆ ನೀಡಿ ಅವತ್ತೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಹಾಗಾಗಿ, ಗಾಯಾಳುಗಳನ್ನು ಎಲ್ಲಿಯೋ ಮುಚ್ಚಿಟ್ಟಿದ್ದಾರೆ ಎಂದು ಅನುಮಾನಿಸುವ ಅಗತ್ಯವಿಲ್ಲ. ಇನ್ನು 23 ಪೊಲೀಸರಿಗೆ ಕಲ್ಲೇಟು ಬಿದ್ದಿದೆ. ಇವರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಯಾರಿಗೂ ಆಸ್ಪತ್ರೆಗೆ ದಾಖಲಾಗುವಷ್ಟು ಗಾಯ ಆಗಿರಲಿಲ್ಲ. ಎಲ್ಲರೂ ಡಿಸ್ಚಾರ್ಜ್ ಆಗಿ ಕೆಲಸಕ್ಕೆ ಮತ್ತೆ ಹಾಜರಾಗಿದ್ದಾರೆ. ಆದ್ದರಿಂದ ಯಾವುದೇ ತನಿಖೆ ಅಗತ್ಯವಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂತು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ವಿರೋಧಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಾಲ್ವರು ಗಾಯಾಳುಗಳು ಐಸಿಯುದಲ್ಲಿದ್ದರು. ರಾತ್ರೋರಾತ್ರಿ ಅವರನ್ನು ಬೇರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ತಿಳಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಆದರೆ, ನಮ್ಮ ಹಕ್ಕು ಕೇಳಿ ಪ್ರತಿಭಟಿಸುವಾಗ ಈ ರೀತಿ ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ. ನಮ್ಮ ಮೇಲೆ ಗೋಲಿಬಾರ್ ಮಾಡಲೂ ಸರ್ಕಾರ ಸಿದ್ಧವಾಗಿತ್ತು ಎಂದು ಪಂಚಮಸಾಲಿ ಸ್ವಾಮೀಜಿ ಹೇಳಿದ್ದಾರೆ. ಹಾಗಾಗಿ, ಸರ್ಕಾರ ಕ್ಷಮೆ ಕೇಳುವಂತೆ ಒತ್ತಾಯಿಸಿದರು.