image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯದ ಸಂಸದರಿಗೆ ಹೊಸ ಕಾರು ಭಾಗ್ಯ

ರಾಜ್ಯದ ಸಂಸದರಿಗೆ ಹೊಸ ಕಾರು ಭಾಗ್ಯ

ಬೆಂಗಳೂರು: ಕಳೆದ ವರ್ಷವಷ್ಟೇ ಸಂಪುಟ ಸಚಿವರುಗಳಿಗೆ 33 ಹೊಸ ಕಾರುಗಳನ್ನು ಖರೀದಿಸಿದ್ದ ರಾಜ್ಯ ಸರ್ಕಾರ, ಇದೀಗ ರಾಜ್ಯದ 26 ಸಂಸದರಿಗೂ ಹೊಸ ಹೈ ಎಂಡ್ ಕಾರುಗಳನ್ನು ಖರೀದಿ ಮಾಡಿದೆ.

ಹೊಸ ಇನ್ನೊವಾ ಕ್ರಸ್ಟಾ ಹೈಬ್ರಿಡ್ ಕಾರುಗಳನ್ನು ರಾಜ್ಯದ ಸಂಸದರಿಗೆ ಖರೀದಿಸಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ 33 ಸಚಿವರುಗಳಿಗೆ ಹೊಸ ಇನ್ನೋವಾ ಕ್ರಿಸ್ಟಾ ಹೈ ಎಂಡ್ ಕಾರುಗಳನ್ನು ಖರೀದಿಸಿತ್ತು.‌ ಒಂದು ಇನ್ನೋವಾ ಹೈಬ್ರಿಡ್ ಎಸ್​​ಯುವಿ ಕಾರಿಗೆ ಸುಮಾರು 30 ಲಕ್ಷ ರೂ. ವೆಚ್ಚವಾಗಿತ್ತು.‌ ಆರ್ಥಿಕ ಹೊರೆಯ ಮಧ್ಯೆ 33 ಸಚಿವರುಗಳಿಗೆ ಹೊಸ ಕಾರು ಖರೀದಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿತ್ತು.

ರಾಜ್ಯದ ಸಂಸದರಿಗೆ ರಾಜ್ಯ ಸರ್ಕಾರವೇ ಕಾರು ಖರೀದಿಸಿ ಕೊಡುತ್ತದೆ. ಹಳೆ ಕಾರುಗಳು ಗರಿಷ್ಠ ಮಿತಿಯಾದ 1 ಲಕ್ಷ ಕಿ.ಮೀ.ಗೂ ಅಧಿಕ ದೂರ ಕ್ರಮಿಸಿರುವುದರಿಂದ ನಿಯಮದ ಪ್ರಕಾರ ಹೊಸ ಕಾರು ಖರೀದಿಸಬೇಕಾಗಿದೆ. ನಿಯಮದಂತೆ 1 ಲಕ್ಷ ಕಿ.ಮೀ. ಸಂಚಾರ ಅಥವಾ 3 ವರ್ಷ ಬಳಕೆ ಯಾವುದು ಮೊದಲು ಅದರನ್ವಯ ಹೊಸ ಕಾರು ಖರೀದಿಸಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾರು ಖರೀದಿ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸದರಿಗೆ ಸರ್ಕಾರ ಖರೀದಿಸಿರುವ ಪ್ರತಿ ಕಾರಿಗೆ ಸುಮಾರು 29 ಲಕ್ಷ ರೂ. ವೆಚ್ಚವಾಗಿದೆ. ಆ ಮೂಲಕ 26 ಸಂಸದರ ಕಾರುಗಳಿಗೆ 7.54 ಕೋಟಿ ರೂ. ವೆಚ್ಚವಾಗಿದೆ.

ಹೊಸ ಕಾರು ಖರೀದಿಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ಬಳಿಕ ಹಣಕಾಸು ಇಲಾಖೆ ಹೊಸ ಕಾರು ಖರೀದಿಗೆ ಅನುಮತಿ ನೀಡಲಾಗಿದೆ ಎಂದು ಡಿಐಪಿಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖರೀದಿಸಲಾದ 26 ಕಾರುಗಳ ಪೈಕಿ 21 ಸಂಸದರಿಗೆ ಹಸ್ತಾಂತರ ಮಾಡಲಾಗಿದೆ. ಇನ್ನೂ 5 ಕಾರುಗಳನ್ನು ಸಂಸದರಿಗೆ ಹಸ್ತಾಂತರಿಸಬೇಕಾಗಿದೆ. ಅವುಗಳನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ