ಉತ್ತರ ಕನ್ನಡ : "ಸೈಬರ್ ಹಾಗೂ ಇನ್ನಿತರ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಜೊತೆಗೆ ಉತ್ತಮ ತರಬೇತಿಗಳನ್ನು ಪೊಲೀಸ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ನೀಡಲಾಗಿದೆ" ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪೊಲೀಸರಿಗೆ ತರಬೇತಿ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಂತ್ರಜ್ಞಾನಗಳ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ಈಗ ಹೊಸ ಹೊಸ ಅಪರಾಧಗಳು ನಡೆಯುತ್ತಿವೆ. ಮೊದಲು ದರೋಡೆ ಪ್ರಕರಣಗಳು ಹೆಚ್ಚು ಆಗುತ್ತಿದ್ದವು. ಈಗ ಅಪರಾಧಗಳ ಸ್ವರೂಪ ಬದಲಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಮೋಸ ಮಾಡಬಹುದು. ಸೈಬರ್ ಮೂಲಕ ಅನೇಕ ರೀತಿಯ ವಂಚನೆಗಳು ನಡೆಯುತ್ತಿವೆ ಎಂದರು.
ಸೈಬರ್ ವಂಚನೆ, ಮಹಿಳೆಯರಿಗೆ ಸಂಬಂಧಪಟ್ಟ ಅಪರಾಧ, ಪೋಕ್ಸೊ, ಎಐ ಬಳಕೆ, ಡ್ರೋನ್ ಬಳಕೆ ಮಾಡಿ ದುಷ್ಕೃತ್ಯ, ಆರ್ಥಿಕ ಅಪರಾಧ, ಮಾದಕ ವಸ್ತುಗಳ ಬಗ್ಗೆ ಹೆಚ್ಚಿನ ಅಪರಾಧಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಗೂ ತರಬೇತಿ ನೀಡಲಾಗುತ್ತಿದೆ. ಪೊಲೀಸ್ ತರಬೇತಿಯಲ್ಲಿ ಸಾಕಷ್ಟು ಹೊಸತನ ತರಲಾಗಿದೆ. ಜರ್ಮನ್ ತಂತ್ರಜ್ಞಾನದ ಸಂದರ್ಭ ಆಧಾರಿತ ತರಬೇತಿ ಕೋರ್ಸ್ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಅಲ್ಲದೆ ತರಬೇತಿಯ ಅವಧಿಯನ್ನು ಒಂದು ವರ್ಷ ಮಾಡಲಾಗಿದೆ. ಬಡ್ತಿ ಹೊಂದಿದವರು ಕಡ್ಡಾಯವಾಗಿ ತರಬೇತಿ ಪಡೆಯುವಂತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನೊಂದು ಸುಸಜ್ಜಿತ ಸೈಬರ್ ಲ್ಯಾಬ್ ನಿರ್ಮಿಸಲು ಇನ್ಫೋಸಿಸ್ ನೆರವು ಕೇಳಲಾಗಿದೆ. ಇನ್ಫೋಸಿಸ್ ಮೈಸೂರು ವಿಭಾಗದ ಮುಖ್ಯಸ್ಥ ವಿನಾಯಕ ಹೆಗಡೆ ಅವರನ್ನು ಸಂಪರ್ಕಿಸಿ ಸಿಎಸ್‌ಆರ್ ಅನುದಾನದಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸೈಬರ್ ಲ್ಯಾಬ್ ನಿರ್ಮಿಸಿಕೊಡಲು ಕೇಳಲಾಗಿದೆ. ಈಗಾಗಲೇ ಅವರು ಸಿಐಡಿಗೆ ಒಂದು ಸೈಬರ್ ಲ್ಯಾಬ್ ನಿರ್ಮಿಸಿಕೊಟ್ಟಿದ್ದಾರೆ.
ನಮ್ಮ ಅಧಿಕಾರಿಗಳಿಗೆ ಹೆಚ್ಚಿನ ಅರಿವು ಮೂಡಬೇಕಾಗಿದೆ. ಈ ಕಾರಣದಿಂದ ಮೇಲಿಂದ ಮೇಲೆ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ನಮ್ಮ ಅಧಿಕಾರಿಗಳು ಕೂಡ ಈ ಬಗ್ಗೆ ತಿಳಿದುಕ್ಕೊಳ್ಳುವುದು ಸಾಕಷ್ಟು ಇದೆ. ತಮ್ಮ ಜವಾಬ್ದಾರಿ, ಸಿಆರ್‌ಪಿಸಿ ಬದಲು ಇದೀಗ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಜಾರಿಯಾಗಿದೆ. ಈ ಕಾಯ್ದೆ ಬಗ್ಗೆ ಮೊದಲು ನಮ್ಮ ಸಿಬ್ಬಂದಿಗಳಿಗೆ ಹೆಚ್ಚಿನ ತಿಳುವಳಿಕೆ ಮೂಡಬೇಕಾಗಿರುವ ಕಾರಣ ಪ್ರತಿ ತರಬೇತಿ ಕೇಂದ್ರ ಹಾಗೂ ಪ್ರತ್ಯೇಕವಾಗಿ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತಿದೆ ಎಂದರು.