ಬೆಂಗಳೂರು: ಸಂವಿಧಾನ ಬದಲಾಯಿಸಬೇಕು ಎಂದು ಪೇಜಾವರ ಶ್ರೀ ಹಾಗೂ ಸಂಘ ಪರಿವಾರ ನಿಷ್ಠೆಯ ಸ್ವಾಮೀಜಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಆತಂಕಕಾರಿ ಹಾಗೂ ಕಳವಳಕಾರಿ ಮಾತ್ರವಲ್ಲ, ಸಂವಿಧಾನಕ್ಕೆ ಬೆದರಿಕೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸಂವಿಧಾನ ವಿರೋಧಿ ಸಂಘಟನೆ ಆರ್ಎಸ್ಎಸ್ ನೂರು ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಸಂವಿಧಾನ ಬದಲಾಯಿಸಬೇಕು ಎಂದು ಪರಿವಾರ ನಿಷ್ಟೆಯ ಯತಿಗಳು ಬೀದಿಗಿಳಿದು ಮಾತಾಡುತ್ತಿರುವುದಕ್ಕೂ ಸಂಬಂಧವಿದೆ. ಇದರಲ್ಲಿ ಸಂಘ ಪರಿವಾರದ ನೂರು ವರ್ಷಗಳ ಸಂಭ್ರಮಾಚಾರಣೆಯ ಕಾರ್ಯಕ್ರಮದ ಗುಪ್ತಸೂಚಿ ಇರುವುದು ಸ್ಪಷ್ಟ ಎಂದಿದ್ದಾರೆ.
ಸಮಾಜ ಸುಧಾರಕರ ಆಶಯಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ ರಚಿತವಾಗಿರುವ ಸರ್ವ ಧರ್ಮ, ಸಹಬಾಳ್ವೆ ತಿರುಳಿರುವ ಸಂವಿಧಾನವನ್ನು ಬದಲಾವಣೆಗೆ ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ. ನೂರಾರು ಕೋಟಿ ಜನಸಂಖ್ಯೆಯ ಭಾರತದಲ್ಲಿ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಲು ಸಂವಿಧಾನ ಅವಕಾಶ ನೀಡಿದೆ. ಇದರ ಬದಲಾಗಿ ಪೇಜಾವರರು ಯಾವ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ. ದಲಿತರು-ಶೂದ್ರರು ಶ್ರೇಷ್ಟತೆಯ ವ್ಯಸನಕ್ಕೆ ತಲೆಬಾಗಬೇಕೇ? ಮಹಿಳೆಯರು ಅತ್ಯಾಚಾರಿಗಳನ್ನು ಆರಾಧಿಸಬೇಕೆನ್ನುವ ವ್ಯವಸ್ಥೆ ಇರಬೇಕೆ? ಜೀತದಾರರು, ಶ್ರಮಿಕ ವರ್ಗ ಮಾಲೀಕರ ಅಡಿಯಾಳಾಗಿರಬೇಕೇ ಎಂದು ಶ್ರೀಗಳಿಗೆ ಪ್ರಶ್ನಿಸಿದ್ದಾರೆ.