image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆಗಾಗಿ ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ಪರಿಗಣಿಸಬೇಕೆಂದು ನಿಮ್ಹಾನ್ಸ್​ಗೆ ಸೂಚಿಸಿದ ಹೈಕೋರ್ಟ್

ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆಗಾಗಿ ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ಪರಿಗಣಿಸಬೇಕೆಂದು ನಿಮ್ಹಾನ್ಸ್​ಗೆ ಸೂಚಿಸಿದ ಹೈಕೋರ್ಟ್

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮಾದರಿ ಉದ್ಯೋಗದಾತರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿರುವ ಹೈಕೋರ್ಟ್, ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆಗಾಗಿ (ಸಿಸಿಎಲ್) ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಿದೆ. ನಿಮ್ಹಾನ್ಸ್‌ನ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಶುಶ್ರೂಷಕಿ ಅನಿತಾ ಜೋಸೆಫ್ ಎಂಬವರಿಗೆ 120 ದಿನಗಳ ಕಾಲ ಹೆಚ್ಚುವರಿ ಸಿಸಿಎಲ್‌ ಅನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮಂಜೂರು ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಿಮ್ಹಾನ್ಸ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ಪೀಠ, ನಿಮ್ಹಾನ್ಸ್​ನಲ್ಲಿ ಕೆಲಸ ಮಾಡುವ ಒಟ್ಟು 700 ಶುಶ್ರೂಷಕಿಯರಲ್ಲಿ ಒಬ್ಬರಿಗೆ 120 ದಿನಗಳ ಕಾಲ ಸಿಸಿಎಲ್ ಮಂಜೂರು ಮಾಡಿದಲ್ಲಿ ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ತಿಳಿಸಿ, ನಿಮ್ಹಾನ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಅಲ್ಲದೆ, ರಜೆಯನ್ನು ತಿರಸ್ಕರಿಸಿರುವ ಹಕ್ಕು ಉದ್ಯೋಗದಾತರಿಗೆ ಇದ್ದರೂ, ಅದು ಸಂದರ್ಭಗಳನ್ನು ಅವಲಂಬಿಸುತ್ತದೆ ಮತ್ತು ಸಿಸಿಎಲ್‌ನ ಮಹತ್ವವನ್ನು ಕಡೆಗಣಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ. ಮಗುವಿಗೆ ಎದೆ ಹಾಲುಣಿಸುವ ಮೂಲಭೂತ ಹಕ್ಕು ತಾಯಿಗಿದೆ ಎಂಬುದಾಗಿ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿರುವ ಪೀಠ, ಬೆಳೆಯುತ್ತಿರುವ ಮಗುವಿನ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ನಿರ್ಧಾರವರನ್ನು ತೆಗೆದುಕೊಳ್ಳಲು ತಾಯಿಯ ತೀರ್ಮಾನವೇ ಅಂತಿಮ ಎಂದು ಹೇಳಿದೆ.

Category
ಕರಾವಳಿ ತರಂಗಿಣಿ