image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಂಸದ ಕೋಟ ಶ್ರೀನಿವಾಸ್​ ಪುಜಾರಿ ವಿರುದ್ಧದ ಪ್ರಕರಣ ರದ್ದು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಂಸದ ಕೋಟ ಶ್ರೀನಿವಾಸ್​ ಪುಜಾರಿ ವಿರುದ್ಧದ ಪ್ರಕರಣ ರದ್ದು

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ವೇಳೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಖಾಸಗಿ ಕಾಲೇಜು ಆವರಣದಲ್ಲಿ ರಾಜಕೀಯ ಭಾಷಣ ಮಾಡಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ದಾಖಲಾಗಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಚುನಾವಣಾ ಸಂಚಾರ ಜಾಗೃತ ದಳದ ಅಧಿಕಾರಿಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಸಂಚಾರ ಜಾಗೃತ ದಳದ ಅಧಿಕಾರಿಯು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್​ 188ರ (ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘಿಸಿದ ಆರೋಪ) ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ. ಈ ದೂರು ದಾಖಲಿಸುವ ಅಧಿಕಾರ ವ್ಯಾಪ್ತಿಯನ್ನು ಜಾಗೃತ ದಳದ ಅಧಿಕಾರಿ ಹೊಂದಿಲ್ಲ. ಆದ್ದರಿಂದ ಈ ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿದರು. ಈ ವಾದ ಪುರಸ್ಕರಿಸಿದ ಪೀಠ, ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧದ ದೂರನ್ನು ರದ್ದುಪಡಿಸಿತು.

ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ಧ ಕೋಟ ಶ್ರೀನಿವಾಸ ಪೂಜಾರಿ ಅವರು, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಖಾಸಗಿ ಕಾಲೇಜು ಆವರಣದಲ್ಲಿ 2024ರ ಮಾ. 30ರಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು.

Category
ಕರಾವಳಿ ತರಂಗಿಣಿ