image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸದ್ಯದಲ್ಲೇ ದೇಶದಲ್ಲಿ 2ನೇ ಸ್ಥಾನಕ್ಕೆ ನಮ್ಮ ರಾಜ್ಯ,: ಸಮೃದ್ಧ ಬಂಡವಾಳ ಹರಿದು ಬರಲಿದೆ -ಸಿ.ಎಂ ಸಿದ್ದರಾಮಯ್ಯ

ಸದ್ಯದಲ್ಲೇ ದೇಶದಲ್ಲಿ 2ನೇ ಸ್ಥಾನಕ್ಕೆ ನಮ್ಮ ರಾಜ್ಯ,: ಸಮೃದ್ಧ ಬಂಡವಾಳ ಹರಿದು ಬರಲಿದೆ -ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು: ಕೈಗಾರಿಕಾ ಕ್ಷೇತ್ರದ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಸದ್ಯಕ್ಕೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು, 2025ರ ಜೂನ್ ವೇಳೆಗೆ ದ್ವಿತೀಯ ಸ್ಥಾನಕ್ಕೆ ಏರಲಿದೆ. ಈಗ ಆಗಿರುವ 54,427 ಕೋಟಿ ರೂ. ಹೂಡಿಕೆಯ ಜತೆಗೆ ಮುಂದಿನ ಆರೇಳು ತಿಂಗಳಲ್ಲಿ ಇನ್ನೂ 19,059 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರುವುದು ಖಾತ್ರಿಯಾಗಿದೆ. ಈ ಮೂಲಕ ರಾಜ್ಯವು 73 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯನ್ನು ಕಾಣಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಜಿಕೆವಿಕೆ ಆವರಣದಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟಲ್ಸ್ ಸಂಸ್ಥೆಯ 78ನೇ ವಾರ್ಷಿಕ ತಾಂತ್ರಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯವು ಈ ವರ್ಷ ಈಗಾಗಲೇ 21 ವಿವಿಧ ಉದ್ಯಮಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ 46,375 ಕೋಟಿ ರೂ. ಬಂಡವಾಳ ಹರಿದು ಬರಲಿದ್ದು, 27 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಗಳ ಮೂಲಕ 90 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆ ಆಗಲಿರುವಂತಹ ಒಟ್ಟು 669 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ. ಇವುಗಳಿಂದಾಗಿ 1.73 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಅವರು ವಿವರಿಸಿದ್ದಾರೆ.

ಕೈಗಾರಿಕಾ ಅಭಿವೃದ್ಧಿಯ ಜತೆಯಲ್ಲೇ ಪರಿಸರ ಸಂರಕ್ಷಣೆ ಮತ್ತು ಎಲ್ಲರನ್ನೂ ಒಳಗೊಂಡಿರುವ ಬೆಳವಣಿಗೆಗಳ ಜತೆಗೆ ಸಮತೋಲನ ಸಾಧಿಸುವ ಸವಾಲು ನಮ್ಮ ಮುಂದಿದೆ. ಮೆಟಲ್ಸ್ (ಲೋಹಗಳು) ಮತ್ತು ಮೆಟಿರೀಯಲ್ಸ್ ವಲಯಗಳಲ್ಲಿ ಇವೆಲ್ಲವನ್ನೂ ಸಾಧ್ಯವಾಗಿಸುವಂತಹ ಸಂಶೋಧನೆ ಮತ್ತು ನಾವೀನ್ಯತಾ ಉಪಕ್ರಮಗಳಿಗೆ ಸರಕಾರವು ಒತ್ತು ನೀಡುತ್ತಿದೆ ಎಂದು ಅವರು ನುಡಿದಿದ್ದಾರೆ. ಮೆಟಲ್ಸ್ ಮತ್ತು ಮೆಟೀರಿಯಲ್ಸ್ ಕ್ಷೇತ್ರವೂ ಸೇರಿದಂತೆ ಎಲ್ಲ ವಲಯಗಳಲ್ಲೂ ಕರ್ನಾಟಕವು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಲೋಹ ಮತ್ತು ಅದಕ್ಕೆ ಪೂರಕವಾದ ವಲಯಗಳು ಆರ್ಥಿಕ ಅಭಿವೃದ್ಧಿಯ ಆಚೆಗೂ ತಮ್ಮ ಪ್ರಭಾವ ಬೀರುತ್ತವೆ. ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವ ಜಗತ್ತಿನಲ್ಲಿ ಉದ್ಭವಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಉದ್ಯಮಿಗಳು ಸರಿಯಾದ ಪರಿಹಾರವನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಂಧರ್ಭ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಐಐಎಂ ಅಧ್ಯಕ್ಷ ಸಜ್ಜನ್ ಜಿಂದಾಲ್, ಜಿಂದಾಲ್ ಅಧ್ಯಕ್ಷ ಪಿ.ಕೆ.ಮುರುಗನ್ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ